Delhi Congress Protest; ಜಂತರ್ ಮಂತರ್‌ನಲ್ಲಿ ಕನ್ನಡದ ಕಹಳೆ ಮೊಳಗಿಸಲಿದೆ ಕಾಂಗ್ರೆಸ್!
ಬೆಂಗಳೂರು; ಕೇಂದ್ರ ಸರ್ಕಾರಕ್ಕೆ ಬರಬೇಕಾದ ಅನುದಾನ ನೀಡದೇ ಅನ್ಯಾಯ ಮಾಡಿದೆ ಎಂದು ಆರೋಪಿಸಿ ರಾಜ್ಯ ಕಾಂಗ್ರೆಸ್ ನಾಯಕರು ನಾಳೆ ಬೆಳಗ್ಗೆ 11 ಗಂಟೆಗೆ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ಈಗಾಗಲೇ ಕಾಂಗ್ರೆಸ್ ಶಾಸಕರು, ಸಚಿವರು, ರಾಜ್ಯಸಭಾ ಸದಸ್ಯರು ಎಲ್ಲಾ ದೆಹಲಿಯತ್ತ ಪ್ರಯಾಣ ಬೆಳೆಸಿದ್ದಾರೆ. ರಾತ್ರಿ ದೆಹಲಿಯಲ್ಲೇ ಉಳಿದುಕೊಂಡು ನಾಳೆ ಬೆಳಗ್ಗೆ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ದೆಹಲಿಯಲ್ಲಿಯೇ ಇದ್ದಾರೆ.
ಕನ್ನಡದ ಕಹಳೆ ಮೊಳಗಿಸಲು ಹೊರಟ ಕಾಂಗ್ರೆಸ್
ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ಮಾಡುತ್ತಿದೆ. ಬರೀ ಅನುದಾನಕ್ಕಾಗಿ ಈ ಪ್ರತಿಭಟನೆಯಾದರೂ, ಕನ್ನಡಿಗರ ಮನಸೆಳೆಯುವ ನಿರ್ಧಾರದೊಂದಿಗೆ ಈ ಪ್ರತಿಭಟನೆಗೆ ಇಳಿದಂತೆ ಕಾಣುತ್ತಿದೆ. ಯಾಕಂದ್ರೆ ಈ ಹಿಂದೆ ಯಾವತ್ತೂ ಕಾಂಗ್ರೆಸ್ ಪಕ್ಷ ಕನ್ನಡದ ಬಾವುಟ ಹಿಡಿದು ಪ್ರತಿಭಟನೆ ಮಾಡಿಲ್ಲ. ಇದೇ ಮೊದಲ ಬಾರಿಗೆ ಕಾಂಗ್ರೆಸ್ ದೆಹಲಿಯಲ್ಲಿ ಕನ್ನಡ ಬಾವುಟಗಳನ್ನು ಹಿಡಿದು ಪ್ರತಿಭಟನೆ ನಡೆಯುತ್ತಿದೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಹೋಗಿ ಕನ್ನಡದ ಭಾವುಟ ಹಿಡಿದರೆ, ಕನ್ನಡಿಗರು ಕಾಂಗ್ರೆಸ್ ಪರವಾದ ನಿಲುವು ತಾಳಬಹುದು. ಕನ್ನಡಿಗರ ಗಮನ ಸೆಳೆಯಬಹುದು ಎಂಬ ಲೆಕ್ಕಾಚಾರ ಇದೆ. ಈಗಾಗಲೇ ಸಾವಿರಾರು ಕನ್ನಡದ ಬಾವುಟಗಳನ್ನು ರೆಡಿ ಮಾಡಿ ದೆಹಲಿಗೆ ತೆಗೆದುಕೊಂಡು ಹೋಗಲಾಗಿದೆ. ಇದರಿಂದಾಗಿ ನಾಳೆ ಜಂತರ್ ಮಂತರ್‌ನಲ್ಲಿ ಕುಂಕುಮ, ಅರಶಿಣ ಬಣ್ಣವೇ ರಾರಾಜಿಸಲಿದೆ.
ದೆಹಲಿ ಟ್ರಿಪ್ ಹೋಗ್ತಿದ್ದಾರೆ ಎಂದ ಈಶ್ವರಪ್ಪ
ಇನ್ನು ಕಾಂಗ್ರೆಸ್ ಪ್ರತಿಭಟನೆಯನ್ನು ಬಿಜೆಪಿ ನಾಯಕ ಈಶ್ವರಪ್ಪ ಲೇವಡಿ ಮಾಡಿದ್ದಾರೆ. ಕಾಂಗ್ರೆಸ್ ಶಾಸಕರು ಬೇರೆ ಪಕ್ಷಕ್ಕೆ ಹೋಗಬಹುದೆಂಬ ಭೀತಿ ಇದೆ. ಈ ಕಾರಣಕ್ಕಾಗಿ ಶಾಸಕರನ್ನು ದೆಹಲಿಗೆ ಟ್ರಿಪ್ ಕರೆದುಕೊಂಡು ಹೋಗಲಾಗುತ್ತಿದೆ ಎಂದು ಈಶ್ವರಪ್ಪ ಲೇವಡಿ ಮಾಡಿದ್ದಾರೆ.