BengaluruPolitics

Explainer; ಬಜರಂಗದಳ ನಿಷೇಧ ವಿಚಾರ; ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಸೇರಿಸಿದ್ದು ಯಾರು ಗೊತ್ತಾ..?

ಬೆಂಗಳೂರು; ನಿನ್ನೆಯಷ್ಟೇ ಕಾಂಗ್ರೆಸ್‌ ತನ್ನ ಚುನಾವಣಾ ಪ್ರಣಾಳಿಕೆ ರಿಲೀಸ್‌ ಮಾಡಿದೆ. ಇದರಲ್ಲಿ ಜನರನ್ನು ಸೆಳೆಯುವ ಹಲವಾರು ಅಶ್ವಾಸನೆಗಳಿವೆ. ಅದರಲ್ಲೂ ಹಲವು ಉಚಿತ ಯೋಜನೆಗಳು ಬಡ ಜನರನ್ನು ಆಕರ್ಷಿಸಿವೆ ಕೂಡಾ. ಈಗಾಗಲೇ ಕಾಂಗ್ರೆಸ್‌ ಹಲವು ದಿನಗಳಿಂದ ಜನರಿಗೆ ಉಚಿತ ಆಶ್ವಾಸನೆಗಳ ಗ್ಯಾರೆಂಟಿ ಕಾರ್ಡ್‌ ವಿತರಣೆ ಮಾಡಿತ್ತು. ಇದರಿಂದಾಗಿ ಕರ್ನಾಟಕ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಉತ್ತಮ ವಾತಾವರಣ ಇತ್ತು… ಆದ್ರೆ ಪ್ರಣಾಳಿಕೆಯಲ್ಲಿ ಸೇರ್ಪಡೆಯಾಗಿರುವ ಒಂದೇ ಒಂದು ಅಂಶ ಬಿಜೆಪಿಗೆ ರಣಾಸ್ತ್ರವಾಗಿದೆ…

ಕಾಂಗ್ರೆಸ್‌ ಉಚಿತ ಘೋಷಣೆಗಳ ನಡುವೆ ಸೊರಗಿದ್ದ ಬಿಜೆಪಿಗೆ ಇದು ಮಹಾ ಅಸ್ತ್ರವಾಗಿ ಸಿಕ್ಕಿದೆ.. ಅದೇ ಬಜರಂಗದಳ ನಿಷೇಧ ವಿಚಾರ. ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಮತೀಯ ಚಟುವಟಿಕೆ ನಡೆಸುವ ಸಂಘಟನೆಗಳನ್ನು ನಿಷೇಧ ಮಾಡಲಾಗುವುದು ಎಂದು ಪ್ರಸ್ತಾಪಿಸಲಾಗಿದೆ. ಪಿಎಫ್‌ಐ ಆಗಿರಬಹುದು, ಬಜರಂಗದಳ ಆಗಿರಬಹುದು, ಮತೀಯ ಚಟುವಟಿಕೆ ನಡೆಸಿದರೆ ನಿಷೇಧ ಮಾಡಲಾಗುವುದು ಎಂದು ಪ್ರಣಾಳಿಕೆಯಲ್ಲಿ ಬರೆಯಲಾಗಿದೆ. ಈಗಾಗಲೇ ಪಿಎಫ್‌ಐ ಬ್ಯಾನ್‌ ಮಾಡಲಾಗಿರುವುದರಿಂದ ಬಜರಂಗದಳವನ್ನು ಕಾಂಗ್ರೆಸ್‌ ಟಾರ್ಗೆಟ್‌ ಮಾಡಿದೆ ಎಂದು ಬಿಜೆಪಿ ಆರೋಪಿಸುತ್ತಿದೆ. ಈ ಮೂಲಕ ಹಿಂದೂಗಳನ್ನು ಸಂಘಟಿಸುವ ಅವರನ್ನು ಬಿಜೆಪಿಯತ್ತ ಸೆಳೆಯುವ ಪ್ರಯತ್ನ ಮಾಡುತ್ತಿದೆ.

ಅಂದಹಾಗೆ ಪ್ರಣಾಳಿಕೆ ತಯಾರಿ ಸಮಿತಿಯ ಉಸ್ತುವಾರಿ ಹೊತ್ತವರು ಮಾಜಿ ಡಿಸಿಎಂ ಜಿ.ಪರಮೇಶ್ವರ್‌ ಅವರು. ಆದ್ರೆ ಪರಮೇಶ್ವರ್‌ ನೇತೃತ್ವದ ಪ್ರಣಾಳಿಕಾ ಸಮಿತಿಯಲ್ಲಿ ಬಜರಂಗದಳ ಸೇರಿಸುವ ಬಗ್ಗೆ ತೀರ್ಮಾನ ಆಗಿರಲಿಲ್ಲ ಎಂದು ಹೇಳಲಾಗುತ್ತಿದೆ. ಮತೀಯ ಚಟುವಟಿಕೆ ನಡೆಸುವ ಸಂಘಟನೆಗಳನ್ನು ನಿಷೇಧ ಮಾಡಲಾಗುವುದು ಎಂಬುದನ್ನಷ್ಟೇ ಪ್ರಣಾಳಿಕಾ ಸಮಿತಿ ಸೇರಿಸಿತ್ತು. ಆದ್ರೆ, ಇದರಲ್ಲಿ ಬಜರಂಗದಳ ಹಾಗೂ ಪಿಎಫ್‌ಐ ಸೇರಿಸಲು ಕಾರಣರಾಗಿದ್ದು ಸಿದ್ದರಾಮಯ್ಯ ಅವರು ಎಂದು ಹೇಳಲಾಗುತ್ತಿದೆ.

ಮತೀಯ ಚಟುವಟಿಕೆ ನಡೆಸುವ ಸಂಘಟನೆಗಳನ್ನು ನಿಷೇಧ ಮಾಡಲಾಗುವುದು ಎಂಬುದಷ್ಟೇ ಇದ್ದರೆ ಸಾಲೋದಿಲ್ಲ. ಅದರಲ್ಲಿ ಸ್ಪಷ್ಟತೆ ಇರಬೇಕು. ಯಾವುದೇ ಮತೀಯ ಸಂಘಟನೆ ಇರಲಿ, ಮತೀಯ ಚಟುವಟಿಕೆ ನಡೆಸಿದರೆ ನಿಷೇಧಿಸುತ್ತೇವೆ ಎಂದು ಹೇಳೋಣ ಎಂದು ಸಿದ್ದರಾಮಯ್ಯ ಸಲಹೆ ನೀಡಿದ್ದರು ಎನ್ನಲಾಗಿದೆ. ಇದಕ್ಕೆ ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ಸುರ್ಜೇವಾಲಾ ಕೂಡಾ ಒಪ್ಪಿಗೆ ಕೊಟ್ಟಿದ್ದರಂತೆ. ಹೀಗಾಗಿಯೇ ಕೊನೆಯ ಕ್ಷಣದಲ್ಲಿ ಪಿಎಫ್‌ಐ ಹಾಗೂ ಬಜರಂಗದಳದ ಹೆಸರನ್ನು ಸೇರಿಸಲಾಯ್ತು ಎಂದು ಹೇಳಲಾಗುತ್ತಿದೆ.

ಯಾವುದೇ ಮತ ಸಂಘಟನೆಯಾದರೂ ಮತೀಯ ಚಟುವಟಿಕೆ ನಡೆಸಬಾರದು ಎಂದು ತೋರಿಸುವುದಕ್ಕಾಗಿ ಕಾಂಗ್ರೆಸ್‌ ಈ ರೀತಿಯ ಸಾಲು ಸೇರಿಸಿತ್ತು. ಆದ್ರೆ ಸೈದ್ಧಾಂತಿಕ ಸ್ಪಷ್ಟನೆ ನೀಡಲು ಹೋಗಿ ಕಾಂಗ್ರೆಸ್‌ ವಿವಾದ ಮೈಮೇಲೆ ಎಳೆದುಕೊಂಡಿದೆ. ಚುನಾವಣೆ ದಿನಾಂಕ ಹತ್ತಿರವಾಗಿರುವಾಗ ಬಿಜೆಪಿ ಇದೊಂದು ಪ್ರಬಲ ಅಸ್ತ್ರವಾಗಿ ಸಿಕ್ಕಿದೆ. ಸಿದ್ದರಾಮಯ್ಯ ಹಾಗೂ ಸುರ್ಜೇವಾಲಾ ಅವರ ನಿಲುವೇ ಕಾಂಗ್ರೆಸ್‌ಗೆ ಮುಳುವಾಗುವ ಸಾಧ್ಯತೆ ಇದೆ.

ಧರ್ಮ ಮತ್ತು ಜಾತಿ ಹೆಸರಲ್ಲಿ ದ್ವೇಷವನ್ನು ಬಿತ್ತುವ ವ್ಯಕ್ತಿಗಳು ಅಥವಾ ಸಂಘಟನೆಗಳ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳಲು ಕಾಂಗ್ರೆಸ್ ಪಕ್ಷ ಬದ್ಧವಾಗಿದೆ. ಸಂವಿಧಾನವೇ ಪವಿತ್ರ ಎಂದು ನಾವು ನಂಬಿದ್ದೇವೆ. ಹೀಗಾಗಿ ನಾವು ಯಾವುದೇ ವ್ಯಕ್ತಿಗಳಾಗಲಿ, ಬಜರಂಗದಳ ಮತ್ತು ಪಿಎಫ್‌ಐಗಳು ಸೇರಿದಂತೆ ಬಹುಸಂಖ್ಯಾತ ಅಥವಾ ಅಲ್ಪಸಂಖ್ಯಾತ ಇತರರಾಗಲಿ ಸಂವಿಧಾನದ ವಿಧಿಗಳನ್ನು ಉಲ್ಲಂಘಿಸುವುದನ್ನು ಸಹಿಸುವುದಿಲ್ಲ. ಅಂತಹ ವ್ಯಕ್ತಿಗಳು ಮತ್ತು ಸಂಘಟನೆಗಳ ನಿಷೇಧ ಮಾಡುವುದಕ್ಕೂ ನಾವು ಸಿದ್ಧ ಎಂದು ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಹೇಳಿತ್ತು.

Share Post