BengaluruPolitics

ನಾನಪ್ಪ ಗಂಡ್ಸು ಎಂದ ಡಿ.ಕೆ.ಶಿವಕುಮಾರ್‌; ತಣ್ಣಗಾಯ್ತು ಅಶ್ವತ್ಥನಾರಾಯಣ ಆವೇಶ..!

ಬೆಂಗಳೂರು; ಯಾರಪ್ಪ ಗಂಡ್ಸು… ಹೀಗಂತ ರಾಮನಗರದಲ್ಲಿ ನಿಂತು ಅಬ್ಬರಿಸಿದ್ದರು ಸಚಿವ ಅಶ್ವತ್ಥನಾರಾಯಣ… ರಾಮನಗರ ಜಿಲ್ಲೆಯ ರಾಜಕೀಯ ದಶಕಗಳಿಂದ ದೇವೇಗೌಡ ಹಾಗೂ ಡಿ.ಕೆ.ಶಿವಕುಮಾರ್‌ ಅವರ ಕುಟುಂಬದ ಕೈಯಲ್ಲಿದೆ.. ಇಲ್ಲಿ ಇವರ ಕಡೆಯವರೇ ಗೆಲ್ಲೋದು.. ಇಂತ ಸ್ಥಳದಲ್ಲೇ ನಿಂತು ಅಶ್ವತ್ಥನಾರಾಯಣ ಅಬ್ಬರಿಸಿದ್ದರು… ಅಶ್ವತ್ಥನಾರಾಯಣ ಅವರನ್ನು ಹಾಗೆ ಅಬ್ಬರಿಸುವಂತೆ ಮಾಡಿಸಿದ್ದು, ಬಿಜೆಪಿ ಹೈಕಮಾಂಡ್‌.. ಯಾಕಂದ್ರೆ ಅಶ್ವತ್ಥನಾರಾಯಣ ಕೂಡಾ ಒಕ್ಕಲಿಗರು. ಅದೇ ರಾಮನಗರ ಜಿಲ್ಲೆಯವರು.. ಹೀಗಾಗಿ ಅಶ್ವತ್ಥನಾರಾಯಣ ಅವರನ್ನು ಮುಂದಿಟ್ಟುಕೊಂಡು ಡಿ.ಕೆ. ಬ್ರದರ್ಸ್‌ ಪ್ರಾಬಲ್ಯ ಕಡಿಮೆ ಮಾಡಲು ಹೊರಟಿತ್ತು ಬಿಜೆಪಿ. ಇದೇ ಕಾರಣಕ್ಕೆ ಅಶ್ವತ್ಥನಾರಾಯಣರನ್ನು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಲಾಗಿತ್ತು. ಹೋದಲ್ಲೆಲ್ಲಾ ಅಬ್ಬರಿಸಿ ಮಾತನಾಡುತ್ತಿದ್ದ ಅಶ್ವತ್ಥನಾರಾಯಣ, ಡಿಕೆ ಸಹೋದರರನ್ನು ಸರ್ಕಾರಿ ಕಾರ್ಯಕ್ರಮಗಳಲ್ಲೂ ಕಡೆಗಣಿಸುತ್ತಿದ್ದರು. ಆದ್ರೆ ಅಶ್ವತ್ಥನಾರಾಯಣ್‌ ಅವರ ಆವೇಶ ಈಗ ತಣ್ಣಗಾಗಿಬಿಟ್ಟಿದೆ. ಕನಕಪುರದಲ್ಲಿ ಡಿ.ಕೆ.ಶಿವಕುಮಾರ್‌ ಅವರು ಒಂದೂಕಾಲು ಲಕ್ಷ ಮತಗಳ ಅಂತರದಿಂದ ಗೆಲ್ಲೋ ಮೂಲಕ ಅಶ್ವತ್ಥನಾರಾಯಣ್‌ ಅವರಿಗೆ ನೋಡಪ್ಪ.. ನಾನೇನಪ್ಪ ಗಂಡ್ಸು ಅನ್ನೋ ಸಂದೇಶವನ್ನು ರವಾನಿಸಿದ್ದಾರೆ.

ರಾಮನಗರ ಹಾಗೂ ಮಂಡ್ಯದಲ್ಲಿ ಜಿಲ್ಲೆಯಲ್ಲಿ ಒಕ್ಕಲಿಗರ ನಾಯಕರನ್ನು ಸೆಳೆದು ಬಿಜೆಪಿ ಪ್ರಬಲಗೊಳಿಸುವುದಕ್ಕಾಗಿ ಅಶ್ವತ್ಥನಾರಾಯಣ್‌ ಅವರಿಗೆ ಬಿಜೆಪಿ ಹೈಕಮಾಂಡ್‌ ಟಾಸ್ಕ್‌ ಕೊಟ್ಟಿತ್ತು. ಅದರ ಭಾಗವಾಗಿಯೇ ಅಶ್ವತ್ಥನಾರಾಯಣ್‌ ಅವರು ಡಿಕೆ ಸಹೋದರರ ವಿರುದ್ಧ ಅಬ್ಬರಿಸುತ್ತಿದ್ದರು. ವೇದಿಕೆಗಳಲ್ಲಿ ಏಕವಚನದಲ್ಲಿ ಮಾತನಾಡುತ್ತಿದ್ದರು. ಕಿರುಚಾಡುತ್ತಿದ್ದರು. ಒಂದು ವೇದಿಕೆಯಲ್ಲಿ ಸಂಸದ ಡಿ.ಕೆ.ಸುರೇಶ್‌ ಅವರಿದ್ದರು. ಅದೇ ವೇದಿಕೆಯಲ್ಲಿ ಸಚಿವ ಅಶ್ವತ್ಥನಾರಾಯಣ ಯಾರಪ್ಪ ಗಂಡ್ಸು ಎಂದು ಕಿರುಚಾಡಿದ್ದರು.. ಆಗ ಆಕ್ರೋಶಗೊಂಡು ಡಿ.ಕೆ.ಶಿವಕುಮಾರ್‌ ಸಚಿವ ಅಶ್ವತ್ಥನಾರಾಯಣ್‌ ವಿರುದ್ಧ ಸಿಟ್ಟಿಗೆದ್ದಿದ್ದರು. ಇಂತಹ ಘಟನೆಗಳು ಆಗಾಗ ಮರುಕಳಿಸುತ್ತಲೇ ಇದ್ದವು.

ಡಿಕೆ ಸಹೋದರರ ಪ್ರಾಬಲ್ಯ ಕಡಿಮೆ ಮಾಡಲೆಂದೇ ಡಿ.ಕೆ.ಶಿವಕುಮಾರ್‌ ವಿರುದ್ಧ ಆರ್‌.ಅಶೋಕ್‌ ಅವರನ್ನು ಕಣಕ್ಕಿಳಿಸಲಾಯಿತು. ಮತದಾರರಿಗೆ ರಾಮನಗರ ಜಿಲ್ಲೆ ಅಭಿವೃದ್ದಿ ಬಗ್ಗೆ ಹೇಳುತ್ತಾ ಮತದಾರರನ್ನು ಸೆಳೆಯೋ ಪ್ರಯತ್ನ ಮಾಡಲಾಯಿತು. ಆರ್‌.ಅಶೋಕ್‌ ಕೂಡಾ ಒಕ್ಕಲಿಗ ನಾಯಕರಾಗಿದ್ದು, ಒಕ್ಕಲಿಗ ಮತಗಳನ್ನು ಸೆಳೆಯೋ ಪ್ರಯತ್ನ ಮಾಡಲಾಯಿತು. ಚುನಾವಣೆಗೂ ಮುನ್ನ ಸಚಿವ ಅಶ್ವತ್ಥನಾರಾಯಣ ಚುನಾವಣೆಯಲ್ಲಿ ತೋರಿಸುತ್ತೇವೆ ಎಂದು ಹೇಳುತ್ತಲೂ ಬಂದಿದ್ದರು. ಆದ್ರೆ ಎಷ್ಟೇ ತಿಪ್ಪರಲಾಗ ಹಾಕಿದರೂ ಡಿ.ಕೆ.ಶಿವಕುಮಾರ್‌ ಅವರನ್ನು ಸೋಲಿಸೋದಕ್ಕೆ ಆಗಲಿಲ್ಲ. ಅಷ್ಟೇ ಅಲ್ಲ, ರಾಮನಗರ ಜಿಲ್ಲೆಯಲ್ಲಿ ಬಿಜೆಪಿ ಕಮಲ ಅರಳಿಸೋದಕ್ಕೂ ಆಗಿಲ್ಲ.

ಡಿ.ಕೆ.ಶಿವಕುಮಾರ್‌ ಅವರು ಒಂದೂಕಾಲು ಲಕ್ಷ ಮತಗಳ ಅಂತರದಲ್ಲಿ ಗೆದ್ದಿದ್ದಾರೆ. ಅವರ ವಿರುದ್ಧ ನಿಂತಿರುವ ಬಿಜೆಪಿಯ ಆರ್‌.ಅಶೋಕ್‌ ಹಾಗೂ ಜೆಡಿಎಸ್‌ ಅಭ್ಯರ್ಥಿ ಇಬ್ಬರೂ ಠೇವಣಿ ಕಳೆದುಕೊಂಡಿದ್ದಾರೆ. ಬಿಜೆಪಿ ಅಭ್ಯರ್ಥಿಯ ಠೇವಣಿ ಕಳೆದುಕೊಳ್ಳುವಂತೆ ಮಾಡುವ ಮೂಲಕ ಡಿ.ಕೆ.ಶಿವಕುಮಾರ್‌ ನಾನಪ್ಪ ಗಂಡ್ಸು ಎಂದು ತೋರಿಸಿಕೊಟ್ಟಿದ್ದಾರೆ.

 

Share Post