BengaluruPolitics

ಗುಲಾಂ ನಬಿ ಕಾಂಗ್ರೆಸ್‌ನ ಉಪಕಾರ ಸ್ಮರಣೆ ಮರೆತಿದ್ದಾರೆ; ಡಿ.ಕೆ.ಶಿವಕುಮಾರ್‌

ಬೆಂಗಳೂರು; 50 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿ ಹಾಗೂ ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲ ಅಧಿಕಾರ ಅನುಭವಿಸಿದ ಗುಲಾಂ ನಬಿ ಅಜಾದ್ ಅವರು ಪಕ್ಷಕ್ಕೆ ಶಕ್ತಿ ತುಂಬುವ ಕಾಲದಲ್ಲಿ ಉಪಕಾರ ಸ್ಮರಣೆ ಮರೆತಿರುವುದು ಖಂಡನೀಯ. ದೇಶ ಕಷ್ಟ ಕಾಲದಲ್ಲಿರುವಾಗ, ದೇಶವನ್ನು ಒಂದುಗೂಡಿಸಿ ದೇಶದಲ್ಲಿ ಐಕ್ಯತೆ, ಸಮಗ್ರತೆ, ಶಾಂತಿ ತರಲು ನಾವೆಲ್ಲ ಹೋರಾಟ ಮಾಡುವಾಗ ಅವರು ತಮ್ಮ ಜವಾಬ್ದಾರಿಯಿಂದ ಹಿಂದೆ ಸರಿದಿದ್ದಾರೆ. ಆ ಮೂಲಕ ಎತ್ತ ತಾಯಿಗೆ ದ್ರೋಹ ಬಗೆದಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಸ್ಥಾನದ ಉದಯಪುರದಲ್ಲಿ ನಡೆದ ಚಿಂತನಾ ಶಿಬಿರದಲ್ಲಿ 600 ಜನ ನಾಯಕರು ಚರ್ಚೆ ಮಾಡಿ ಭಾರತವನ್ನು ಯಾವ ರೀತಿ ಉಳಿಸಬೇಕು, ಹೇಗೆ ಮುಂದೆ ತೆಗೆದುಕೊಂಡು ಹೋಗಬೇಕು ಎಂದು ತೀರ್ಮಾನಿಸಲಾಗಿತ್ತು. ಆ ಸಭೆಯಲ್ಲಿ ಗುಲಾಂ ನಬಿ ಅಜಾದ್ ಅವರ ಪಾತ್ರವೂ ಪ್ರಮುಖವಾಗಿತ್ತು. ಆದರೆ ಅವರು ಇಂದು ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ನೀಡಿರುವ ಅಜಾದ್ ಅವರು ಐದು ಪುಟಗಳ ಪತ್ರ ಬರೆದಿದ್ದು, ಅದರಲ್ಲಿ ಅನೇಕ ವಿಚಾರ ಪ್ರಸ್ತಾಪಿಸಿದ್ದಾರೆ.ಅವರು 1977ರಿಂದ ಇಲ್ಲಿಯವರೆಗೂ 50 ವರ್ಷಗಳಲ್ಲಿ ಅವರು ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ರಾಜಕಾರಣ ಆರಂಭಿಸಿದ್ದು, ಎಲ್ಲ ಪ್ರಮುಖ ವಿಭಾಗದಲ್ಲಿ ಕೆಲಸ ಮಾಡಿ, ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಜತೆಗೆ 20 ವರ್ಷಗಳ ಕಾಲ ಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ, ರಾಜ್ಯ ಸಭೆ ಹಾಗೂ ಲೋಕಸಭೆ ಸದಸ್ಯರಾಗಿ ಅಧಿಕಾರ ಅನುಭವಿಸಿದ್ದಾರೆ. ಇಷ್ಟಾದರೂ ಇಂದು ರಾಜೀನಾಮೆ ತೀರ್ಮಾನ ಮಾಡಿದ್ದಾರೆ. ಅವರಿಗೆ ಏನೆಂದು ಹೇಳಬೇಕೋ ಮಾಧ್ಯಮದವರೇ ವಿಶ್ಲೇಷಿಸಬೇಕು ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.

ಭಾರತ್ ಜೋಡೋ ಕಾರ್ಯಕ್ರಮ ಮಾಡಬೇಕು ಎಂದು ಹೇಳಿದವರು ನಮ್ಮಂತಹ ನಾಯಕರಿಗೆ ಮಾದರಿಯಾಗಿ ಇರಬೇಕಾಗಿತ್ತು, ಮಾರ್ಗದರ್ಶನ ನೀಡಬೇಕಾಗಿತ್ತು. ನಿಮಗೆ ಅಸಮಾಧಾನ ಇದ್ದರೆ ಅದನ್ನು ಚರ್ಚೆ ಮಾಡಬಹುದಿತ್ತು. ಆದರೆ ಸೋನಿಯಾ ಗಾಂಧಿ ಅವರು ಅನಾರೋಗ್ಯದಿಂದಾಗಿ ವಿದೇಶಕ್ಕೆ ಹೋಗಿರುವಾಗ ಈ ನಿರ್ಧಾರಕ್ಕೆ ಬಂದಿರುವುದು ಖಂಡನೀಯ ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.

Share Post