BengaluruPolitics

ಇಂದಿರಾ ಕ್ಯಾಂಟೀನ್‌ಗೆ ದಿಢೀರ್‌ ಭೇಟಿ ಕೊಟ್ಟ ಡಿ.ಕೆ.ಶಿವಕುಮಾರ್

ಬೆಂಗಳೂರು; ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್‌ ಅವರು ಇಂದು ದಿಢೀರ್‌ ನಗರ ಪ್ರದಕ್ಷಿಣೆ ಕೈಗೊಂಡಿದ್ದಾರೆ. ಜೊತೆಗೆ ದಿಢೀರ್‌ ಅಂತ ಇಂದಿರಾ ಕ್ಯಾಂಟೀನ್‌ಗೆ ಭೇಟಿ ಕೊಟ್ಟು ಅಲ್ಲಿನ ಆಹಾರದ ಗುಣಮಟ್ಟವನ್ನು ಪರೀಕ್ಷೆ ಮಾಡಿದ್ದಾರೆ. 

ಬೆಳಗ್ಗೆ 9.11ಕ್ಕೆ ಸರಿಯಾಗಿ ಡಿ.ಕೆ.ಶಿವಕುಮಾರ್‌ ಅವರು ದಾಸರಹಳ್ಳಿ ವಲಯದ ವಾರ್ಡ್‌ ಸಂಖ್ಯೆ 39ರ ಚೊಕ್ಕಸಂದ್ರದ ಇಂದಿರಾ ಕ್ಯಾಂಟೀನ್‌ಗೆ ಭೇಟಿ ಕೊಟ್ಟರು. ಆದ್ರೆ ಅಲ್ಲಿ ಅದಾಗಲೇ ತಿಂಡಿ ಖಾಲಿಯಾಗಿತ್ತು. ಎಷ್ಟು ಪ್ಲೇಟ್‌ ಬರುತ್ತೆ ಎಂದು ಅಲ್ಲಿನ ಮ್ಯಾನೇಜರ್‌ಗೆ ಡಿಕೆಶಿ ಕೇಳಿದರು. 208 ಪ್ಲೇಟ್‌ ಬಂದಿತ್ತು. ಆಗಲೇ ಖಾಲಿಯಾಗಿದೆ ಎಂದು ಮ್ಯಾನೇಜರ್‌ ಹೇಳಿದರು. ಮಾಧ್ಯಮ ಮಿತ್ರರಿಗೆ ತಿಂಡಿ ಕೊಡಿಸೋಣ ಎಂದುಕೊಂಡೆ ಎನ್ನುತ್ತಾ ನಗೆ ಬೀರಿದರು.

ನಂತರ ದಾಸರಹಳ್ಳಿಯ 15ನೇ ವಾರ್ಡ್ ಕ್ಯಾಂಟೀನ್ ಗೆ ಭೇಟಿ ನೀಡಿದ ಡಿ.ಕೆ.ಶಿವಕುಮಾರ್‌, ಉಪ್ಪಿಟ್ಟು, ಕೇಸರಿಬಾತ್ ಸವಿದರು. ಈ ಸಂದರ್ಭದಲ್ಲಿ ಪಕ್ಕದಲ್ಲಿ ತಿಂಡಿ ತಿನ್ನುತ್ತಿದ್ದವರನ್ನು ಮಾತನಾಡಿಸಿ, ಮಾಹಿತಿ ಪಡೆದರು. ಆ ವ್ಯಕ್ತಿಯಿಂದ ಕ್ಯಾಂಟೀನ್ ಸಿಬ್ಬಂದಿ ₹5 ಬದಲು ₹10 ಪಡೆದಿರುವುದು ಗಮನಕ್ಕೆ ಬಂದಾಗ ಅದನ್ನು ಪ್ರಶ್ನಿಸಿದರು. ಇದೇ ಸಮಯದಲ್ಲಿ ಇಂದಿರಾ ಕ್ಯಾಂಟೀನ್ ಕುಂದುಕೊರತೆ ದೂರು ಸಲ್ಲಿಸುವ ಸಹಾಯವಾಣಿಗೆ ಕರೆ ಮಾಡಿಸಿದಾಗ ಆ ಸಂಪರ್ಕ ದುರಸ್ಥಿಯಲ್ಲಿರುವುದನ್ನು ಗಮನಿಸಿದರು. ತಕ್ಷಣ ಸರಿಪಡಿಸಲು ಸೂಚನೆ ನೀಡಿದರು.

ಅಲ್ಲದೆ ಪ್ರತಿ ವಾರ, ತಿಂಗಳಿಗೆ ಇಂದಿರಾ ಕ್ಯಾಂಟೀನ್ ಗೆ ಭೇಟಿ ನೀಡಿ ಗುಣಮಟ್ಟ ಪರಿಶೀಲಿಸುವಂತೆ ಪಾಲಿಕೆ ಆರೋಗ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದರು.

Share Post