BengaluruPolitics

ಆಟೋ ಚಾಲಕರ ಜೊತೆ ಡಿಕೆಶಿ ಸಂವಾದ; ಆಟೋ ಓಡಿಸಿದ ಕೆಪಿಸಿಸಿ ಅಧ್ಯಕ್ಷ

ಬೆಂಗಳೂರು; ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಬೆಂಗಳೂರು ಅರಮನೆ ಮೈದಾನದಲ್ಲಿ ಆಟೋ ಚಾಲಕರ ಜತೆ ಗುರುವಾರ ಸಂವಾದ ನಡೆಸಿದರು. ಎಐಸಿಸಿ ಕಾರ್ಯದರ್ಶಿ ಅಭಿಶೇಖ್ ದತ್ ಶಾಸಕ ರಿಜ್ವಾನ್ ಅರ್ಶದ್ ಅವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶಿವಕುಮಾರ್ ಅವರು ಅರಮನೆ ಮೈದಾನದ ಪ್ರವೇಶದ್ವಾರದಿಂದ ಸಂವಾದ ಸ್ಥಳದವರೆಗೂ ಆಟೋ ಚಾಲನೆ ಮಾಡಿ ಚಾಲಕ ಸಮೂಹದ ಜತೆ ತಾವು ಇರುವುದಾಗಿ ವಿಶ್ವಾಸ ತುಂಬಿದರು.

ಇದೇ ವೇಳೆ ಮಾತನಾಡಿದ ಡಿ.ಕೆ.ಶಿವಕುಮಾರ್‌, ಇಂದು ನನ್ನ ಜೀವನದಲ್ಲಿ ಬಹಳ ನೆನಪಿನಲ್ಲಿ ಉಳಿಯಲಿರುವ ದಿನ. ಕಾರಣ ಇಂದು ನಾನು ಪವಿತ್ರ ಆಟೋ ಚಾಲನೆ ಮಾಡಿದ ದಿನ. ನಿಮ್ಮ ಕುಟುಂಬದ ಸದಸ್ಯನಾಗಿ ನಾನು ಇಲ್ಲಿ ನಿಂತಿದ್ದೇನೆ. ಇದಕ್ಕಾಗಿ ನನಗೆ ಹೆಮ್ಮೆ ಇದೆ. ನೀವು ಸ್ವಾಭಿಮಾನದ ಬದುಕು ನಡೆಸುತ್ತಿದ್ದೀರಿ. ನೀವು ದೇಶ ಹಾಗೂ ಜನ ಸೇವಕರು. ಮಧ್ಯಮವರ್ಗ ಹಾಗೂ ಜನ ಸಾಮಾನ್ಯರ ಸಾರಥಿಗಳು ಎಂದರು.

ಇಡೀ ಪ್ರಪಂಚದಲ್ಲಿ ಈ ವರ್ಗಕ್ಕೆ ಜಾತಿ, ಧರ್ಮದ ಬೇಧವಿಲ್ಲ. ಜನ ಎಲ್ಲಿಗೆ ತಲುಪಬೇಕೋ ಅಲ್ಲಿಗೆ ತಲುಪಿಸುವ ಪವಿತ್ರ ಕೆಲಸ ಮಾಡಿಕೊಂಡು ಬಂದಿದ್ದೀರಿ. ನಾನು ಆಗಾಗ್ಗೆ, ಅರ್ಚಕನ ಪ್ರಭಾವದಿಂದ ಶಿಲೆಯಲ್ಲೂ ಶಂಕರನನ್ನು ಕಾಣಬಹುದು ಎಂಬ ಮಾತು ಹೇಳುತ್ತಿರುತ್ತೇನೆ. ಅದರಂತೆ ಒಬ್ಬ ವ್ಯಕ್ತಿ ಸಾಧನೆಗೆ ನೀವು ಸಂಪರ್ಕದ ವ್ಯವಸ್ಥೆಯಾಗಿದ್ದೀರಿ. ಜನರ ನಂಬಿಕೆ ಗಳಿಸಿದ್ದೀರಿ. ನಿಮಗೆ ಕೋಟಿ ಧನ್ಯವಾದಗಳು. ಇತ್ತೀಚೆಗೆ ನಡೆಯುತ್ತಿರುವ ಸಮೀಕ್ಷೆಗಳಲ್ಲಿ ಶೇ.80 ರಷ್ಟು ಜನ ಕಾಂಗ್ರೆಸ್ ಪಕ್ಷದ ಪರ ಒಲವು ತೋರಿಸುತ್ತಿದ್ದಾರೆ. ನೀವು ದಿನ ನಿತ್ಯ ಗ್ಯಾಸ್, ಡೀಸೆಲ್ ಮೂಲಕ ಗಾಡಿ ಚಾಲನೆ ಮಾಡುತ್ತಿದ್ದು, ಬೆಲೆ ಏರಿಕೆಯಿಂದ ಸರ್ಕಾರ ನಿಮ್ಮ ಜೇಬನ್ನು ದಿನನಿತ್ಯ ಪಿಕ್ ಪಾಕೆಟ್ ಮಾಡುತ್ತಿದೆ ಎಂದು ದೂರಿದರು.

ಕೋವಿಡ್ ಸಮಯದಲ್ಲಿ ನಿಮ್ಮ ಬದುಕಿನ ಮೇಲೆ ಬರೆ ಹಾಕಿದರು. ಈ ಸಮಯದಲ್ಲಿ ನಾವು ಚಾಲಕರಿಗೆ ನೆರವು ನೀಡಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಆಗ್ರಹ ಮಾಡಿದೆವು. ಪ್ರತಿ ತಿಂಗಳು10 ಸಾವಿರ ರೂ. ಪರಿಹಾರ ನೀಡುವಂತೆ ಕೇಳಿದೆವು. ಆದರೆ ಈ ಸರ್ಕಾರ 5 ಸಾವಿರ ಘೋಷಣೆ ಮಾಡಿ, ಒಂದು ತಿಂಗಳೂ ಅದನ್ನು ಸರಿಯಾಗಿ ನೀಡಲಿಲ್ಲ. ನಮ್ಮ ಹಿರಿಯ ನಾಯಕ ಆಸ್ಕರ್ ಫರ್ನಾಂಡೀಸ್ ಅವರು ಪಕ್ಷದಲ್ಲಿ ಚಾಲಕರ ವಿಭಾಗ ಆರಂಭಿಸಬೇಕು ಎಂದು ಸಲಹೆ ನೀಡಿದರು. ಅವರ ಸಲಹೆಯಂತೆ ಪಕ್ಷದಲ್ಲಿ ಚಾಲಕರ ಘಟಕ ಆಂರಂಭಿಸಿದ್ದೆವೆ. ಆ ಮೂಲಕ ನಿಮ್ಮ ಮನೆ ಸದಸ್ಯರಾಗಿದ್ದೇವೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.

Share Post