BengaluruPolitics

ಬೆಂಗಳೂರಿನಲ್ಲಿರುವ ಸರ್ಕಾರಿ ಆಸ್ತಿ ಮೇಲೆ ಪ್ರಭಾವಿ ಕುಳಗಳ ಕಣ್ಣು; ಹೆಚ್ಡಿಕೆ

ಬೆಂಗಳೂರು; ಸಾವಿರಾರು ಕೋಟಿ ರೂಪಾಯಿ ಬೆಲೆ ಬಾಳುವ ಸರಕಾರದ ಆಸ್ತಿಯನ್ನು ನುಂಗುವ ಮಹಾ ಹುನ್ನಾರ ನಡೆದಿದ್ದು, ರಾಜ್ಯ ಸರ್ಕಾರದ ಅತಿದೊಡ್ಡ ಹಗರಣವನ್ನು ವಿಧಾನಸಭೆ ಕಲಾಪದಲ್ಲಿ ಬಯಲು ಮಾಡುವುದಾಗಿ  ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ವಿಧಾನಸೌಧದಲ್ಲಿ ಇಂದು ನಡೆದ ಜೆಡಿಎಸ್‌ ಶಾಸಕಾಂಗ ಪಕ್ಷದ ಸಭೆಯ ನಂತರ ಅವರು ಮಾತನಾಡಿದರು. ಬಿಜೆಪಿಯವರು ಭ್ರಷ್ಟಾಚಾರದ ಬಗ್ಗೆ ದಾಖಲೆಗಳನ್ನು ಕೊಡಿ, ದಾಖಲೆಗಳನ್ನು ಕೊಡಿ ಎಂದು ಪದೇಪದೆ ನನ್ನನ್ನು ಕೆಣಕಿದ್ದಾರೆ. ಸಾವಿರಾರು ಕೋಟಿ ರೂಪಾಯಿ ಬೆಲೆ ಬಾಳುವ ಸರ್ಕಾರಿ ಆಸ್ತಿಯನ್ನು ಅಕ್ರಮವಾಗಿ ಪರಭಾರೆ ಮಾಡಲು ಹೊರಟ ಅತಿದೊಡ್ಡ ಅಕ್ರಮದ ಬಗ್ಗೆ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ ಎಂದರು.

ಸದನದಲ್ಲಿ ಈ ವಿಚಾರದ ಬಗ್ಗೆ ಚರ್ಚೆ ಮಾಡಲು‌‌ ಕಾಂಗ್ರೆಸ್ ಪಕ್ಷ ಸಹಕರಿಸಬೇಕು. ಈ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಜನರಿಗೆ ಗೊತ್ತಾಗಬೇಕು. ನಾನು ಈ ದಾಖಲೆಗಳನ್ನು ಬಿಡುಗಡೆ ಮಾಡುತ್ತಿರುವುದು ಈ ಸರ್ಕಾರದ ಹಗರಣಗಳ ಒಂದು ಸ್ಯಾಂಪಲ್ ಮಾತ್ರ. ಇದನ್ನು ಬಿಜೆಪಿಯವರು ಅರಗಿಸಿಕೊಳ್ಳಲಿ ಸಾಕು ಎಂದು ಕುಮಾರಸ್ವಾಮಿ ಅವರು ಗುಡುಗಿದರು.

ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಜತೆಗಿನ ಭೇಟಿಯ ಬಗ್ಗೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ ಅವರು, ತೃತೀಯ ರಂಗ ಅನ್ನೋದು ಪ್ರಶ್ನೆ ಅಲ್ಲ. ರಾಷ್ಟ್ರೀಯ ಪಕ್ಷಗಳಿಗೆ ಪರ್ಯಾಯ ಶಕ್ತಿಯ ಕನಸು ಅವರದ್ದು ಎಂದರು.

ಕೆಸಿಆರ್ ಅವರು ದೇಶದ ಸಮಸ್ಯೆ ಪರಿಹಾರಕ್ಕೆ ಅವರದ್ದೇ ಆದ ಒಂದು ಕಲ್ಪನೆ ಇಟ್ಟುಕೊಂಡಿದ್ದಾರೆ. ರೈತರ ವಿಚಾರದಲ್ಲಿ ಯಾವ ರೀತಿ ಸಹಾಯ ಆಗಬೇಕು, ರಾಷ್ಟ್ರ ಮಟ್ಟದಲ್ಲಿ ಯಾವ ರೀತಿ ಹೋಗಬೇಕು ಎಂಬ ವಿಚಾರ ಇಟ್ಟುಕೊಂಡಿದ್ದಾರೆ. ಇದಕ್ಕಾಗಿ ನಮ್ಮ ಬೆಂಬಲ ಕೋರಿದ್ದಾರೆ. ನಾವು ಅವರ ಜೊತೆ ಕೈ ಜೋಡಿಸುವ ನಿಟ್ಟಿನಲ್ಲಿ ಯೋಚಿಸಲಾಗಿದೆ ಅವರು ಹೇಳಿದರು.

 

Share Post