BengaluruPolitics

DALIT CM; ಮತ್ತೆ ಶುರುವಾಯ್ತು ದಲಿತ ಸಿಎಂ ಕೂಗು; ಪ್ರಿಯಾಂಕ್‌ ಖರ್ಗೆ, ಪರಮೇಶ್ವರ್‌ ಪರ ಕ್ಯಾಂಪೇನ್‌

ಬೆಂಗಳೂರು; ನಾಳೆ ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬೀಳಲಿದೆ. ಹೀಗಾಗಿ ಎಲ್ಲರಿಗೂ ಕುತೂಹಲ ಹೆಚ್ಚಿದೆ. ರಾಜಕಾರಣಿಗಳ ಎದೆಯಲ್ಲಿ ಢವಢವ ಶುರುವಾಗಿದೆ. ಇತ್ತ ಕಾಂಗ್ರೆಸ್‌ ನಾಯಕರು ಚುನಾವಣೋತ್ತರ ಸಮೀಕ್ಷೆಗಳ ಕಾರಣದಿಂದಾಗಿ ಅತ್ಯುತ್ಸಾಹದಲ್ಲಿದ್ದಾರೆ. ಕೆಲವರು ಸಿಎಂ ಆಗಲು ಕನಸು ಹೊತ್ತು ಕೂತಿದ್ದಾರೆ. ಈ ನಡುವೆ ದಲಿತ ಸಿಎಂ ಕೂಗು ಕೂಡಾ ಶುರುವಾಗಿದೆ. ಒಂದು ಕಡೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್‌ ಖರ್ಗೆಗೆ ಸಿಎಂ ಸ್ಥಾನ ಕೊಡಬೇಕು ಅನ್ನೋದು ಒತ್ತಾಯ ಕೇಳಿಬರುತ್ತಿದೆ. ಅವರ ಅಭಿಮಾನಿಗಳು ಈಗಾಗಲೇ ಸೋಷಿಯಲ್‌ ಮೀಡಿಯಾದಲ್ಲಿ ಕ್ಯಾಂಪೇನ್‌ ಶುರು ಮಾಡಿದ್ದಾರೆ. ಇತ್ತ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್‌ ಕೂಡಾ ನಾನೂ ಸಿಎಂ ರೇಸ್‌ನಲ್ಲಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಪ್ರಿಯಾಂಕ್‌ ಖರ್ಗೆ ಸಿಎಂ. ಅಪ್ಪನ ಕನಸಲ್ಲ, ಕೋಟ್ಯಂತರ ಕನ್ನಡಿಗರ ಕನಸು. ಅರ್ಹತೆ, ಸಾಮರ್ಥ್ಯ, ಯೋಗ್ತೆ, ಜ್ಞಾನ, ಬದ್ಧತೆ, ಕನ್ನಡಿಗರ ಆಶೀರ್ವಾದ ಎಲ್ಲವೂ ಇದೆ. ಹೀಗಂತ ಒಂದು ಪೋಸ್ಟರ್‌ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಪ್ರಿಯಾಂಕ್‌ ಖರ್ಗೆ ಅವರ ತಂದೆ ಮಲ್ಲಿಕಾರ್ಜುನ ಖರ್ಗೆಯವರು ಈಗ ಎಐಸಿಸಿ ಅಧ್ಯಕ್ಷರಾಗಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಸಿಎಂ ಯಾರಾಗಬೇಕೆಂದು ನಿರ್ಧಾರ ಮಾಡುವವರಲ್ಲಿ ಖರ್ಗೆ ಕೂಡಾ ಪ್ರಮುಖರಾಗಿರುತ್ತಾರೆ. ಹೀಗಾಗಿ ಪ್ರಿಯಾಂಕ್‌ ಖರ್ಗೆ ಸಿಎಂ ಆಗಬೇಕೆನ್ನುವ ಕೂಗಿನ ಬಗ್ಗೆ ಕುತೂಹಲ ಹೆಚ್ಚಾಗುವಂತೆ ಮಾಡಿದೆ.

ಮಲ್ಲಿಕಾರ್ಜುನ ಖರ್ಗೆಯವರು ಸುಮಾರು ನಲವತ್ತು ವರ್ಷಕ್ಕೂ ಹೆಚ್ಚು ಕಾಲದಿಂದ ಕಾಂಗ್ರೆಸ್‌ನಲ್ಲಿದ್ದಾರೆ. ಕಳೆದ ಚುನಾವಣೆ ಬಿಟ್ಟರೆ ಎಲ್ಲಾ ಚುನಾವಣೆಗಳಲ್ಲೂ ಗೆದ್ದಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಬೇಕು ಅನ್ನೋ ಕೂಗು ದಶಕಗಳಿಂದ ಇದೆ. ಖರ್ಗೆಗೆ ಸಿಎಂ ಆಗುವ ಅವಕಾಶಗಳು ಮೂರು ಬಾರಿ ಬಂದಿತ್ತು. ಆದ್ರೆ ಕಾರಣಾಂತರಗಳಿಂದ ಅವು ತಪ್ಪಿಹೋದವು. ಆ ಕೊರಗು ಮಲ್ಲಿಕಾರ್ಜುನ ಖರ್ಗೆಯವರಿಗೂ ಇದೆ. ಈ ನಡುವೆ ಅವರ ಅಭಿಮಾನಿಗಳು ಅಪ್ಪನಿಗೆ ಸಿಎಂ ಆಗುವ ಅವಕಾಶ ಸಿಗಲಿಲ್ಲ. ಮಗ ಪ್ರಿಯಾಂಕ್‌ ಖರ್ಗೆಯವರಿಗಾದರೂ ಸಿಗಲಿ ಎಂಬ ಆಸೆ ವ್ಯಕ್ತಪಡಿಸುತ್ತಿದ್ದಾರೆ. ಕಾಂಗ್ರೆಸ್‌ ಪಕ್ಷಕ್ಕೆ ಮೊದಲಿನಿಂದಲೂ ದಲಿತರು ಬೆಂಬಲಿಸುತ್ತಾ ಬಂದಿದ್ದಾರೆ. ಹೀಗಾಗಿ ದಲಿತರನ್ನು ಸಿಎಂ ಯಾಕೆ ಮಾಡಬಾರದು ಎಂದು ದಲಿತರು ಪ್ರಶ್ನಿಸುತ್ತಿದ್ದಾರೆ. ಹೀಗಾಗಿ ಅವಕಾಶವಾದರೆ ಪ್ರಿಯಾಂಕ್‌ ಖರ್ಗೆಗೆ ಸಿಎಂ ಸ್ಥಾನ ಸಿಗಲಿ ಎಂದು ದಲಿತರು, ಅದ್ರಲ್ಲೂ ಖರ್ಗೆ ಬೆಂಬಲಿಗರು ಕೇಳುತ್ತಿದ್ದಾರೆ.

ಇನ್ನು 2013ರಲ್ಲಿ ಡಾ.ಜಿ.ಪರಮೇಶ್ವರ್‌ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಅವರು ಅಧ್ಯಕ್ಷರಾಗಿದ್ದ ಸಮಯದಲ್ಲೇ ಕಾಂಗ್ರೆಸ್‌ಗೆ ಅಧಿಕಾರ ಸಿಕ್ಕಿತ್ತು. ಆದ್ರೆ ಪರಮೇಶ್ವರ್‌ ಅವರು ಕೊರಟಗೆರೆಯಲ್ಲಿ ಸ್ವತಃ ಸೋತಿದ್ದರು. ಈ ಕಾರಣಕ್ಕೆ ಆಗ ಅವರಿಗೆ ಅವಕಾಶ ಸಿಗಲಿಲ್ಲ. ಸಿಎಂ ಗಾದಿಗೆ ಟವೆಲ್‌ ಹಾಕುತ್ತಾರೆ ಎಂಬ ಕಾರಣಕ್ಕೆ ಕಾಂಗ್ರೆಸ್ಸಿಗರೇ ಪರಮೇಶ್ವರ್‌ ಅವರನ್ನು ಸೋಲಿಸಿದರು ಎಂಬ ಆರೋಪ ಕೂಡಾ ಇದೆ. ಅದನ್ನು ಪರಮೇಶ್ವರ್‌ ಅವರು ಕೂಡಾ ಹಲವು ಬಾರಿ ಹೇಳಿದ್ದಾರೆ. ಪರಮೇಶ್ವರ್‌ ಅವರು ಕೂಡಾ ದಶಕಗಳಿಂದ ಪಕ್ಷಕ್ಕಾಗಿ ದುಡಿದಿದ್ದಾರೆ. ಅವರು ಕೂಡಾ ದಲಿತ ನಾಯಕರು. ಮೊದಲಿನಿಂದಲೂ ಪರಮೇಶ್ವರ್‌ ಸಿಎಂ ಸ್ಥಾನಕ್ಕಾಗಿ ಬೇಡಿಕೆ ಇಟ್ಟಿದ್ದಾರೆ.

ಇನ್ನು ಈ ಬಾರಿಯೂ ಕೂಡಾ ಪರಮೇಶ್ವರ್‌ ಈ ಬಗ್ಗೆ ಮಾತನಾಡಿದ್ದಾರೆ. ನಾನೂ ಕೂಡಾ ಸಿಎಂ ಸ್ಥಾನದ ಆಕಾಂಕ್ಷಿ ಎಂದು ಪರಮೇಶ್ವರ್‌ ಹೇಳಿದ್ದಾರೆ. ಆದ್ರೆ, ಕೇಳಿದವರಿಗೆಲ್ಲಾ ಸಿಎಂ ಸ್ಥಾನ ಸಿಗೋದಿಲ್ಲ ಅಂತಾನೂ ಹೇಳಿದ್ದಾರೆ. ದಲಿತ ಸಿಎಂ ಕೂಗು ಪಕ್ಕಕ್ಕಿಟ್ಟರೆ, ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ನಡುವೆ ಸಿಎಂ ಸ್ಥಾನಕ್ಕಾಗಿ ಪೈಪೋಟಿ ಇದೆ. ಡಿ.ಕೆ.ಶಿವಕುಮಾರ್‌ ಅವರು ನಾನು ಹಾಲಿ ಕೆಪಿಸಿಸಿ ಅಧ್ಯಕ್ಷ. ನನ್ನ ನೇತೃತ್ವದಲ್ಲಿ ಪ್ರಚಾರ ನಡೆದಿದೆ. ಹೀಗಾಗಿ ನನಗೇ ಸಿಎಂ ಸ್ಥಾನ ಕೊಡಬೇಕು ಎಂದು ಕೇಳಲಿದ್ದಾರೆ. ಇತ್ತ ಸಿದ್ದರಾಮಯ್ಯ ಅವರು, ನಾನು ಪಕ್ಷ ಸಂಘಟನೆ ಮಾಡಿದ್ದೇನೆ. ಇದು ನನ್ನ ಕೊನೆಯ ಚುನಾವಣೆ. ಈ ಬಾರಿ ನನ್ನನ್ನು ಮುಖ್ಯಮಂತ್ರಿ ಮಾಡಿಬಿಡಿ. ಮುಂದೆ ಯಾರಿಗಾದರೂ ಕೊಡಿ ಎಂದು ಬೇಡಿಕೆ ಇಡಲಿದ್ದಾರೆ.

ಇಬ್ಬರಿಗೂ ಕೂಡಾ ಹಲವು ಶಾಸಕರ ಬೆಂಬಲ ಸಿಗಲಿದೆ. ಸಿದ್ದರಾಮಯ್ಯ ಅವರ ಪರವಾಗಿಯೂ 50-60 ಶಾಸಕರು ನಿಲ್ಲುವ ಸಾಧ್ಯತೆ ಇದೆ. ಇನ್ನು ಹೈಕಮಾಂಡ್‌ ಡಿ.ಕೆ.ಶಿವಕುಮಾರ್‌ ಪರವಾಗಿದೆ. ಒಂದು ವೇಳೆ ಡಿ.ಕೆ.ಶಿವಕುಮಾರ್‌ಗೆ ಸಿಎಂ ಸ್ಥಾನ ಕೊಟ್ಟರೆ ಸಿದ್ದರಾಮಯ್ಯ ಬಂಡಾಯವೆದ್ದರೂ ಏಳಬಹುದು. ಆಗ ಇಬ್ಬರಿಗೂ ಬೇಡ. ಬೇರೆಯವರಿಗೆ ಸಿಎಂ ಸ್ಥಾನ ಕೊಡೋಣ ಎಂದು ಯೋಚನೆ ಮಾಡಿದರೆ, ಅಲ್ಲಿ ಕಾಣಿಸೋದು ಇದೇ ಪರಮೇಶ್ವರ್‌ ಹಾಗೂ ಪ್ರಿಯಾಂಕ್‌ ಖರ್ಗೆ. ದಲಿತರಿಗೆ ಸಿಎಂ ಸ್ಥಾನ ನೀಡಿದರೆ, ದೇಶದಲ್ಲಿ ಹೇಳಿಕೊಳ್ಳೋದಕ್ಕೆ ಕಾಂಗ್ರೆಸ್‌ಗೆ ಒಂದು ವಿಷಯ ಸಿಗುತ್ತದೆ. ನಾವು ಎಲ್ಲಾ ಸಮುದಾಯಕ್ಕೂ ಅಧಿಕಾರ ಕೊಡುತ್ತೇವೆ ಎಂದು ಹೇಳಿಕೊಳ್ಳಬಹುದು. ಹೀಗಾಗಿ, ಫಲಿತಾಂಶ ಯಾರ ಪರವಾಗಿ ಬರುತ್ತೆ, ಯಾರು ಸಿಎಂ ಆಗ್ತಾರೆ ಅನ್ನೋ ಕುತೂಹಲ ಅಂತೂ ಇದ್ದೇ ಇದೆ.

Share Post