ರವಿಚಂದ್ರನ್ ತಾಯಿ ಪಟ್ಟಮ್ಮಾಳ್ ನಿಧನ; ಸುಗುಣ ಆಸ್ಪತ್ರೆಯಲ್ಲಿ ಕೊನೆಯುಸಿರು
ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರ ವಿ. ಅವರ ತಾಯಿ ಪಟ್ಟಮ್ಮಾಳ್ ವೀರಸ್ವಾಮಿ (83) ಇಂದು ಬೆಳಗ್ಗೆ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಕೆಲ ದಿನಗಳ ಹಿಂದೆ ರಾಜಾಜಿನಗರದಲ್ಲಿರುವ ಸುಗುಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ 6.30ರ ಸುಮಾರಿಗೆ ನಿಧನರಾಗಿದ್ದಾರೆ.
ಈಗಾಗಲೇ ಪಾರ್ಥಿವ ಶರೀರವನ್ನು ರವಿಚಂದ್ರನ್ ಅವರ ನಿವಾಸಕ್ಕೆ ತರಲಾಗಿದೆ. ಇಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಸಂಜೆ ಅಂತ್ಯಕ್ರಿಯೆ ನಡೆಸಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಪಟ್ಟಮ್ಮಾಳ್ ವೀರಸ್ವಾಮಿ ಅವರು ಸಿನಿಮಾ ನಿರ್ಮಾಪಕ ಎನ್. ವೀರಸ್ವಾಮಿ ಅವರ ಪತ್ನಿ. ನಟ ರವಿಚಂದ್ರ ಸೇರಿದಂತೆ ಇಬ್ಬರು ಗಂಡು ಮಕ್ಕಳು ಹಾಗೂ ಮೂವರು ಹೆಣ್ಣು ಮಕ್ಕಳನ್ನು ಪಟ್ಟಮ್ಮಾಳ್ ಅವರು ಅಗಲಿದ್ದಾರೆ. ಹಲವು ವರ್ಷಗಳಿಂದ ಮರೆವಿನ ಕಾಯಿಲೆಯಿಂದ ಬಳಲುತ್ತಿದ್ದ ಪಟ್ಟಮ್ಮಾಳ್ ಆರೋಗ್ಯ ಇತ್ತೀಚೆಗೆ ಹದಗೆಟ್ಟಿತ್ತು. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.