Bengaluru

ನೆರೆ ರಾಜ್ಯಗಳ ಜನ ಬಂದು ನೋಡುವಂಥ ಉತ್ತಮ ಸ್ಮಾರಕ ನಿರ್ಮಾಣವಾಗಲಿದೆ- ಸಿಎಂ

ಬೆಂಗಳೂರು:  ಕಂಠೀರವ ಸ್ಟುಡಿಯೋದಲ್ಲಿ ಚಿತ್ರನಟ ಅಂಬರೀಶ್ ಅವರ ಸ್ಮಾರಕ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಸಿಎಂ ಬೊಮ್ಮಾಯಿ ಕರ್ನಾಟಕ ಮಾತ್ರವಲ್ಲದೆ ಸುತ್ತಮುತ್ತಲಿನ ರಾಜ್ಯಗಳ ಜನರೂ ಬಂದು ನೋಡುವಂಥ ಉತ್ತಮ ಸ್ಮಾರಕ ನಿರ್ಮಾಣವಾಗಲಿದೆ ಎಂದರು.

“ಅಂಬರೀಶ್ ಅವರನ್ನು ಯಾವಾಗಲೂ ಅಂಬರೀಶ್ ಎಂದೇ ಸಂಬೋಧಿಸುತ್ತಿದ್ದೆ. ಈಗಲೂ ಹಾಗೆಯೇ ಕರೆಯುತ್ತೇನೆ. ನಮ್ಮದು 40 ವರ್ಷಗಳಿಗೂ ಮಿಗಿಲಾದ ಸ್ನೇಹ. ಒಟ್ಟಿಗೆ ಓಡಾಡಿ, ಸಮಯ ಕಳೆದಿದ್ದೇವೆ.ಊಟ ಮಾಡಿದ್ದೇವೆ. ಕರ್ನಾಟಕದಾದ್ಯಂತ ಸುತ್ತಿದ್ದೇವೆ. ಮಾಡಬಹುದಾದ್ದನ್ನು ಮಾಡಬಾರದ್ದನ್ನು ಮಾಡಿದ್ದೇವೆ” ಅಂಬರೀಶ್ ಅವರೊಂದಿಗಿನ ಒಡನಾಟವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ಮರಿಸಿದ ಬಗೆ ಇದು.

“ಅಂಬರೀಶ್ ತೆರೆದ ಪುಸ್ತಕವಿದ್ದಂತೆ. ಯಾವುದನ್ನೂ ಮುಚ್ಚಿಡುತ್ತಿರಲಿಲ್ಲ. ಯಾರು ತಮ್ಮ ಮನದಾಳದ ಇಚ್ಛೆಯಂತೆ ಜೀವನ ನಡೆಸಲು ಸಾಧ್ಯವಾಗುತ್ತದೆಯೋ ಅವರು ನಿಜವಾದ ಧೀರ. ನಮ್ಮ ಆತ್ಮಸಾಕ್ಷಿಯಂತೆ ನಡೆದುಕೊಳ್ಳುವುದು ಎಷ್ಟು ಕಷ್ಟಸಾಧ್ಯವೆಂದು ಎಲ್ಲರಿಗೂ ಗೊತ್ತಿದೆ. ಆದರೆ ಅಂಬರೀಶ್ ಮಾತ್ರ ಏನೇ ಬಂದರೂ ಆತ್ಮಸಾಕ್ಷಿಗೆ ವಿರುದ್ಧವಾಗಿ ಒಂದು ದಿನವೂ ಬದುಕಲಿಲ್ಲ. ತನ್ನ ಸ್ವಂತ ಇಚ್ಚಾಶಕ್ತಿಯ ಮೇಲೆ ಬದುಕಿದಂತಹ ಒಬ್ಬ ಮೇರು ನಟ ಅಂಬರೀಶ್. ಅವನ ಬಾಯಲ್ಲಿ ‘ಲೇ.’ಎಂದು ಕರೆಸಿಕೊಳ್ಳುವ ಬಯಕೆ ಅವರ ಸ್ನೇಹಿತರಲ್ಲಿತ್ತು. ಅವರು ಗೌರವ ನೀಡಿ ಮಾತನಾಡಿದರೆ ಆ ವ್ಯಕ್ತಿ ಆತ್ಮೀಯರಲ್ಲವೆಂದು ಅನಿಸುತ್ತಿತ್ತು. ಬಾಲ್ಯ, ಚಿತ್ರರಂಗ, ರಾಜಕೀಯದಲ್ಲಿಯೂ ಹಾಗೆಯೇ ಇದ್ದವರು. ಹುಟ್ಟಿನಿಂದ ನಾಯಕತ್ವದ ಗುಣಗಳು ಅವರಲ್ಲಿತ್ತು. ಸಿನಿಮಾದಲ್ಲಿ ಖಳನಾಯಕನ ಪಾತ್ರ ಮಾಡಿದರೂ, ನಾಯಕನ ಪಾತ್ರವರ್ ಅವರಿಗೆ ಶೋಭೆಯನ್ನು ತಂದುಕೊಟ್ಟಿತು ಎಂದರು.

ಅಧಿಕಾರ ಧಿಕ್ಕರಿಸಿ ರಾಜಕಾರಣ
ಬಡವರಿಗೆ, ರೈತರಿಗಾಗಿ ಹೃದಯ ಮಿಡಿಯುತ್ತಿತ್ತು. ಕರ್ನಾಟಕವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಬೇಕೆಂಬ ತುಡಿತ ಅವರಲ್ಲಿತ್ತು. ಆದರೆ ಅಂಬರೀಶನಿಗೆ ಅಧಿಕಾರಕ್ಕೆ ಅಂಟಿಕೊಳ್ಳುವ ಗುಣವಿರಲಿಲ್ಲ. ಅಧಿಕಾರವಿರಲಿ, ಇಲ್ಲದಿರಲಿ ಅದನ್ನು ಧಿಕ್ಕರಿಸಿಯೇ ರಾಜಕಾರಣ ಮಾಡಿದವರು. ಅಂತಹ ವ್ಯಕ್ತಿ ಗಳು ಬಹಳ ಕಡಿಮೆ. ಕೇಂದ್ರ ಸಚಿವರಿದ್ದಾಗ ಕಾವೇರಿ ವಿವಾದ ಎದುರಾದಾಗ ಒಂದು ಕ್ಷಣವೂ ಯೋಚಿಸದೆ, ಅವರು ರಾಜಿನಾಮೆಯನ್ನು ಬಿಸಾಡಿ ಬಂದವರು. ಕಾವೇರಿ ಹೋರಾಟದಲ್ಲಿ ಅಧಿಕಾರ ತ್ಯಾಗ ಮಾಡಿದ್ದು ಅಂಬರೀಶ್ ಮಾತ್ರ ಎಂದರು.

ಮಂಡ್ಯ ಪ್ರೀತಿ
ಮಂಡ್ಯ ಅಂದರೆ ಅವರಿಗೆ ಪಂಚಪ್ರಾಣ. ಮಂಡ್ಯದವರು ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರನ್ನು ಮಾತನಾಡಿಸಿ ಪರಿಹಾರ ಕಲ್ಪಿಸುತ್ತಿದ್ದರು. ಅವರಿದ್ದಲ್ಲಿ ಜೀವಂತಿಕೆ ಇರುತ್ತಿತ್ತು. ವಿದ್ಯುತ್ ಸಂಚಾರವಾದಂಥ ಪರಿಣಾಮ ಇರುತ್ತಿತ್ತು ಎಂದರು.

Share Post