ಎರಡೂ ಲಸಿಕೆ ಪಡೆದಿದ್ದರೆ ಮಾತ್ರ ಕೆಲಸಕ್ಕೆ ಬನ್ನಿ: ಸರ್ಕಾರದಿಂದ ಕಟ್ಟುನಿಟ್ಟಿನ ತೀರ್ಮಾನ
ಬೆಂಗಳೂರು; ಇನ್ನು ಮುಂದೆ ಸರ್ಕಾರಿ ಕಚೇರಿ, ಮಾಲ್, ಹೋಟೆಲ್ ಗಳಲ್ಲಿ ಕೆಲಸ ಮಾಡುವವರು ಎರಡೂ ಡೋಸ್ ಲಸಿಕೆ ಪಡೆದಿರುವುದು ಕಡ್ಡಾಯ. ಎರಡೂ ಡೋಸ್ ಪಡೆಯದವರಿಗೆ ಪ್ರವೇಶವಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ನೇತೃತ್ವದಲ್ಲಿ ನಡೆದ ಸಭೆಯ ನಂತರ ಮಾತನಾಡಿದ ಸಚಿವ ಆರ್.ಅಶೋಕ್, ಕೇರಳದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೇರಳ ಗಡಿಯಲ್ಲಿರುವ ಮಂಗಳೂರು, ಮೈಸೂರು, ಕೊಡಗು, ಚಾಮರಾಜನಗರದಲ್ಲಿ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ. ಚೆಕಿಂಗ್ ಪಾಯಿಂಟ್‌ನಲ್ಲಿ ೨೪ ಗಂಟೆಯೂ ಅಧಿಕಾರಿಗಳು ಇರಬೇಕು. ಹೊರ ರಾಜ್ಯದಿಂದ ಬರುವವರು ಆರ್‌ಟಿಪಿಸಿಆರ್ ವರದಿ ತರುವುದು ಕಡ್ಡಾಯ ಎಂದು ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಇನ್ನು ಕೇರಳದಿಂದ ೧೫ ದಿನಗಳ ಹಿಂದೆ ಬಂದಿದ್ದ ವಿದ್ಯಾರ್ಥಿಗಳು ಅಂದು ಆರ್‌ಟಿಪಿಸಿಆರ್ ವರದಿ ತಂದಿದ್ದರು. ಆದರೂ ಈಗ ಮತ್ತೆ ಅವರಿಗೆ ಆರ್‌ಟಿಪಿಸಿಆರ್ ಟೆಸ್ಟ್ ಮಾಡಿಸಲು ಸೂಚಿಸಲಾಗಿದೆ. ಇನ್ನು ಹಾಸ್ಟೆಲ್‌ಗಳಲ್ಲಿ ಇರುವವರಿಗೆ ನೆಗೆಟಿವ್ ವರದಿ ಬಂದಿದ್ದರೂ, ಎರಡನೇ ಬಾರಿ ಏಳು ದಿನಗಳ ನಂತರ ಟೆಸ್ಟ್ ಮಾಡಬೇಕು ಎಂದು ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಇನ್ನು ಶಾಲಾ-ಕಾಲೇಜುಗಳಲ್ಲಿ ಕೊರೋನಾ ಪಾಸಿಟಿವ್ ಕೇಸ್‌ಗಳು ಹೆಚ್ಚಾಗುತ್ತಿವೆ. ಹೀಗಾಗಿ, ಶಾಲಾ-ಕಾಲೇಜುಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ಜೊತೆಗೆ ಶಾಲಾ-ಕಾಲೇಜುಗಳಲ್ಲಿ ಯಾವುದೇ ಕಾರ್ಯಕ್ರಮಗಳನ್ನು ನಡೆಸದಿರಲು ಸೂಚನೆ ನೀಡಲಾಗಿದೆ. ಜೊತೆಗೆ ಕೊರೋನಾ ಕೇಸ್ ಹೆಚ್ಚಾದ ಕಡೆಗಳಲ್ಲಿ ಜಿಲ್ಲಾಧಿಕಾರಿಗಳು ಹೆಚ್ಚಿನ ಗಮನ ಹರಿಸಬೇಕು.
ಇನ್ನು ಫ್ರಂಟ್‌ಲೈನ್ ವರ್ಕರ್ಸ್‌ಗೆ ಬೂಸ್ಟರ್ ಡೋಸ್ ಲಸಿಕೆ ಕೊಡಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಕೇಂದ್ರ ಸರ್ಕಾರ ಇನ್ನು ಒಂದು ವಾರದಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಿದೆ. ದಕ್ಷಿಣ ಆಫ್ರಿಕಾದಲ್ಲಿ ಕಂಡುಬಂದಿರುವ ಹೊಸ ತಳಿ ಹತ್ತು ಪಟ್ಟು ವೇಗವಾಗಿ ಹರಡುತ್ತದೆಂದು ಹೇಳುತ್ತಿದ್ದಾರೆ. ಹೀಗಾಗಿ, ಜನರು ಕಟ್ಟೆಚ್ಚರದಿಂದ ಇರುವುದು ಒಳ್ಳೆಯದು. ಸರ್ಕಾರ ಕೂಡಾ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ ಎಂದು ಸಚಿವ ಆರ್.ಅಶೋಕ್ ಇದೇ ಸಂದರ್ಭದಲ್ಲಿ ತಿಳಿಸಿದರು.