ಅಧಿಕಾರ ಹಂಚಿಕೆ ಸೂತ್ರ; ಕರ್ನಾಟಕದಲ್ಲಿ ಉಭಯ ಬಣಗಳಲ್ಲಿ ಜೋರಾಗ್ತಿದೆ ತಿಕ್ಕಾಟ
ಬೆಂಗಳೂರು; ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತ ಪಡೆಯುವಲ್ಲಿ ಯಶಸ್ವಿಯಾಯಿತು. ಅನಂತರ ರಾಜ್ಯದಲ್ಲಿ ಕಾಂಗ್ರೆಸ್ ಗೆಲುವಿಗೆ ಕಾರಣರಾದ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ನಡುವೆ ಸಿಎಂ ಸ್ಥಾನಕ್ಕಾಗಿ ಪೈಪೋಟಿ ನಡೆದಿತ್ತು. ಇದರಲ್ಲಿ ಸಿದ್ದರಾಮಯ್ಯ ಸಿಎಂ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಇಬ್ಬರೂ ನಾಯಕರಿಗೆ ತಲಾ 30 ತಿಂಗಳು ಅಧಿಕಾರ ಹಂಚಿಕೆ ಸೂತ್ರ ನೀಡಿದೆ ಎಂದು ಹೇಳಲಾಗುತ್ತಿದೆ. ಸಿದ್ದರಾಮಯ್ಯ ಹಿರಿಯರು ಹಾಗೂ ಇದೇ ಕೊನೆಯ ಚುನಾವಣೆ ಎಂದು ಹೇಳಿರುವುದರಿಂದ ಮೊದಲ ಅವಕಾಶವನ್ನು ಸಿದ್ದರಾಮಯ್ಯ ಅವರಿಗೆ ನೀಡಲಾಗಿದೆ. ಇದಕ್ಕೆ ಡಿ.ಕೆ.ಶಿವಕುಮಾರ್ ಅವರು ಕೂಡಾ ಒಪ್ಪಿ ಸರ್ಕಾರ ಕೂಡಾ ರಚನೆಯಾಗಿದೆ. ಆದ್ರೆ ಸರ್ಕಾರ ಇನ್ನೂ ಟೇಕಾಫೇ ಆಗಿಲ್ಲ. ಆಗಲೇ ಅಧಿಕಾರ ಹಂಚಿಕೆ ವಿಚಾರದಲ್ಲಿ ತಿಕ್ಕಾಟ ಶುರುವಾಗಿದೆ. ಕೆಲ ನಾಯಕರ ಅನಗತ್ಯ ಹೇಳಿಕೆಗಳಿಂದಾಗಿ, ಕಾಂಗ್ರೆಸ್ ಸರ್ಕಾರದಲ್ಲಿ ಗುಂಪುಗಾರಿಕೆ ಎದ್ದು ಕಾಣುತ್ತಿದೆ ಅನ್ನೋದು ಮೇಲ್ನೋಟಕ್ಕೇ ಎದ್ದು ಕಾಣುತ್ತಿವೆ. ಮೇ 20ರಂದು ಸಿಎಂ, ಡಿಸಿಎಂ ಅಧಿಕಾರ ಸ್ವೀಕಾರ ನಡೆದ ದಿನದಿಂದಲೂ ಒಂದಿಲ್ಲೊಂದು ಮನಸ್ತಾಪಗಳು ಇದ್ದೇ ಇದೆ.
ಇತ್ತೀಚೆಗಷ್ಟೇ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಮ್ಮ ಸ್ವಕ್ಷೇತ್ರ ಕನಕಪುರದಲ್ಲಿ ಮತದಾರರಿಗೆ ಕೃತಜ್ಞತಾ ಸಮಾವೇಶ ಹಮ್ಮಿಕೊಂಡಿದ್ದರು. ಈ ವೇಳೆ ಅವರು ತಾವು ಸಿಎಂ ಸ್ಥಾನವನ್ನು ಯಾಕೆ ಬಿಟ್ಟುಕೊಟ್ಟೆ ಎಂಬುದರ ಬಗ್ಗೆ ಮಾತನಾಡಿದ್ದಾರೆ. ರಾಹುಲ್ ಗಾಂಧಿ, ಸೋನಿಯಾಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆಯವರು ನನಗೆ ಒಂದಷ್ಟು ಸಲಹೆ ಸೂಚನೆಗಳನ್ನು ನೀಡಿದರು. ನಾನು ಅವರ ಮಾತಿಗೆ ತಲೆಬಾಗಬೇಕಾಯಿತು. ನೀವು ನನ್ನನ್ನು ಸಿಎಂ ಮಾಡಲೆಂದೇ ದೊಡ್ಡ ಮಟ್ಟದ ಬಹುಮತ ನೀಡಿ ಗೆಲ್ಲಿಸಿದ್ದೀರಿ. ನಿಮ್ಮ ನಿರೀಕ್ಷೆ ಹುಸಿಯಾಗೋದಿಲ್ಲ. ಆದ್ರೆ ಕಾಯಬೇಕು ಅಷ್ಟೇ ಎಂದು ಹೇಳಿದ್ದಾರೆ. ಅಲ್ಲೀತನಕ ತಾಳ್ಮೆಯಿಂದಿರಬೇಕು. ಅಷ್ಟು ಬಿಟ್ಟು ನಾನೇನೂ ಮಾತನಾಡೋದಿಲ್ಲ ಎಂದು ಹೇಳಿದ್ದರು. ಹೀಗೆ ಹೇಳುವಾಗ ಡಿ.ಕೆ.ಶಿವಕುಮಾರ್ ಅವರು ಭಾವುಕರಾಗಿದ್ದರು.
ಇನ್ನು ಹೀಗಿರುವಾಗಲೇ ಸಿದ್ದರಾಮಯ್ಯ ಪಾಳಯದ ನಾಯಕರು ಅಧಿಕಾರ ಹಂಚಿಕೆ ಸೂತ್ರವೇ ಇಲ್ಲ ಎಂದು ಹೇಳಲು ಶುರು ಮಾಡಿದ್ದಾರೆ. ಅಧಿಕಾರ ಹಂಚಿಕೆ ಬಗ್ಗೆ ಹೈಕಮಾಂಡ್ ಮುಟ್ಟದಲ್ಲಿ ಚರ್ಚೆಯೇ ನಡೆದಿಲ್ಲ ಎಂಬ ಹೇಳಿಕೆಗಳನ್ನೂ ಬಹಿರಂಗವಾಗಿ ನೀಡಿದ್ದಾರೆ. ಸಿದ್ದರಾಮಯ್ಯ ಅವರ ಆಪ್ತ ಹಾಗೂ ಲಿಂಗಾಯತ ಮುಖಂಡ ಮತ್ತು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರು, ಸುತ್ತೂರಿನಲ್ಲಿ ಮಾತನಾಡುತ್ತಾ, ಅಧಿಕಾರ ಹಂಚಿಕೆ ಪ್ರಸ್ತಾಪವೇ ಇಲ್ಲ. ಸಿದ್ದರಾಮಯ್ಯ ಅವರೇ ಐದು ವರ್ಷ ಸಿಎಂ ಆಗಿರುತ್ತಾರೆ ಎಂದು ಹೇಳಿದ್ದರು. ಅನಂತರ ಅವರು ಮತ್ತೊಂದು ಹೇಳಿಕೆ ನೀಡಿದ್ದಾರೆ. ನಾನು ಜಲಸಂಪನ್ಮೂಲ ಖಾತೆಯನ್ನು ಬಯಸಿದ್ದೆ. ಆದ್ರೆ, ಸಿದ್ದರಾಮಯ್ಯ ಅವರ ಒತ್ತಡದಿಂದಾಗಿ ಬೃಹತ್ ಕೈಗಾರಿಕೆಯನ್ನು ಆಯ್ಕೆ ಮಾಡಿಕೊಳ್ಳಬೇಕಾಯಿತು ಎಂದು ಹೇಳಿಕೊಂಡಿದ್ದಾರೆ. ಡಿ.ಕೆ.ಶಿವಕುಮಾರ್ ಬಳಿ ಇರುವ ಜಲಸಂಪನ್ಮೂಲ ಖಾತೆ ಬಗ್ಗೆ ಅವರು ಮಾತನಾಡಿ ಮತ್ತೆ ಚರ್ಚೆ ಹುಟ್ಟು ಹಾಕಿದ್ದಾರೆ.
ಇನ್ನು 2018 ರಲ್ಲಿ ಲಿಂಗಾಯತರಿಗೆ ಪ್ರತ್ಯೇಕ ಧರ್ಮ ನೀಡಬೇಕೆಂಬ ಕೂಗು ಹುಟ್ಟುಹಾಕಿದವರೇ ಎಂ.ಬಿ.ಪಾಟೀಲ್. ಅಂದು ಇದಕ್ಕೆ ಡಿ.ಕೆ.ಶಿವಕುಮಾರ್ ವಿರೋಧ ಮಾಡಿದ್ದರು. ಅಂದಿನಿಂದಲೂ ಡಿ.ಕೆ.ಶಿವಕುಮಾರ್ ಹಾಗೂ ಎಂ.ಬಿ.ಪಾಟೀಲರ ನಡುವೆ ಉತ್ತಮ ಬಾಂಧವ್ಯವಿಲ್ಲ. ಇನ್ನು ಮೊನ್ನೆ ನಡೆದ ಸಚಿವ ಸಂಪುಟ ಸಭೆ ಬಳಿಕ ಸಿಎಂ ಸಿದ್ದರಾಮಯ್ಯ ಅವರು, ಉಚಿತ ಘೋಷಣೆಗಳನ್ನು ಮಾಡಿ ಎದ್ದು ಹೋದರು. ಆದ್ರೆ ಡಿಸಿಎಂ ಡಿ.ಕೆ.ಶಿವಕುಮಾರ್ ಅಲ್ಲಿಯೇ ಉಳಿದರು. ಸುದ್ದಿಗೋಷ್ಠಿಯನ್ನು ಮುಂದುವರೆಸಿದರು. ಪಕ್ಷದ ನೀಡಿದ ಭರವಸೆಯನ್ನು ನಾವು ಈಡೇರಿಸುತ್ತಿದ್ದೇವೆ ಎಂದರು. ಅನಂತರ ಸಿಎಂ ಕಚೇರಿಯಿಂದ ಉಚಿತ ಘೋಷಣೆಗಳ ಅನುಷ್ಠಾನಗೊಳಿಸುವ ಆದೇಶ ಹೊರಡಿಸುವ ಮೂಲಕ ಈ ಕೀರ್ತಿ ಸಿದ್ದರಾಮಯ್ಯಗೆ ಸಲ್ಲುವಂತೆ ನೋಡಿಕೊಳ್ಳುವ ಪ್ರಯತ್ನ ಇನ್ನೊಂದೆಡೆ ನಡೆಯಿತು.
ಹೀಗೆ, ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿ ಇಲ್ಲ ಅನ್ನೋದು ಸಾಬೀತಾಗುತ್ತಲೇ ಇದೆ. ಒಂದು ಕಡೆ ಸಿದ್ದರಾಮಯ್ಯ ಐದೂ ವರ್ಷ ಅಧಿಕಾರ ನಡೆಸೋದಕ್ಕೆ ವೇದಿಕೆ ಸಿದ್ಧ ಮಾಡಿಕೊಳ್ಳುತ್ತಿದ್ದಾರೆ. ಇತ್ತ ಡಿ.ಕೆ.ಶಿವಕುಮಾರ್ 30 ತಿಂಗಳ ನಂತರ ಅಧಿಕಾರ ಸಿಗುವ ಆಸೆ ಹೊಂದಿದ್ದಾರೆ. ಈ ಹಿಂದೆ ರಾಜಸ್ಥಾನ, ಛತ್ತಿಸ್ ಗಢ ಸೇರಿದಂತೆ ಹಲವು ಕಡೆ ಹೈಕಮಾಂಡ್ ಅಧಿಕಾರ ಹಂಚಿಕೆ ಸೂತ್ರ ಮಾಡಿದ್ದರೂ ಅದನ್ನು ಪಾಲಿಸಿರಲಿಲ್ಲ. ಹೀಗಾಗಿ ಡಿ.ಕೆ.ಶಿವಕುಮಾರ್‌ಗೆ ಈ ಬಗ್ಗೆ ಭೀತಿ ಇದ್ದೇ ಇದೆ. ಆದ್ರೆ, ಡಿ.ಕೆ.ಶಿವಕುಮಾರ್ ಗೆ ಹೈಕಮಾಂಡ್‌ಗೆ ಬೆಂಬಲವಿದೆ. ಜೊತೆಗೆ ಹೈಕಮಾಂಡ್ ಹೇಳಿದ್ದನ್ನೆಲ್ಲಾ ಡಿ.ಕೆ.ಶಿವಕುಮಾರ್ ಮಾಡಿದ್ದಾರೆ. ಪಾಲಿಸಿದ್ದಾರೆ. ಹೀಗಾಗಿ ಅವರು ಅವರು ಮುಂದೆ ಅಧಿಕಾರ ಸಿಗುವ ಭರವಸೆ ಇಟ್ಟುಕೊಂಡಿದ್ದಾರೆ. ಆದ್ರೆ ಏನಾಗುತ್ತೋ ನೋಡಬೇಕು.