Bengaluru

MEKEDATU PADAYATRA: ನಾಳೆಯಿಂದ ಮೇಕೆದಾಟು ಪಾದಯಾತ್ರೆ; ರಾಮನಗರದಿಂದ ನಡಿಗೆ

ಬೆಂಗಳೂರು: ನಾಳೆಯಿಂದ ಕಾಂಗ್ರೆಸ್‌ ಪಕ್ಷದ ನೇತೃತ್ವದಲ್ಲಿ ಮೇಕೆದಾಟು ಪಾದಯಾತ್ರೆ ಶುರುವಾಗಲಿದೆ. ರಾಮನಗರದಿಂದ ಪಾದಯಾತ್ರೆ ಮುಂದುವರೆಯಲಿದೆ. ಇದಕ್ಕಾಗಿ ಕಾಂಗ್ರೆಸ್‌ ಸಿದ್ಧತೆ ನಡೆಸಿದೆ. ಈ ಬಗ್ಗೆ ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌,  ಮೇಕೆದಾಟುವಿನಿಂದ ರಾಮನಗರದವರೆಗೆ ಪಾದಯಾತ್ರೆ ಮಾಡಿದ್ದೆವು. ಈ ಮಧ್ಯೆ ಕೋವಿಡ್ ಮೂರನೇ ಅಲೆ ಸಂದರ್ಭದಲ್ಲಿ ಜನರ ಆರೋಗ್ಯ, ಕೋರ್ಟ್ ಆದೇಶಕ್ಕೆ ಗೌರವ ಸೂಚಿಸಲು ಈ ಪಾದಯಾತ್ರೆಯನ್ನು ನಿಲ್ಲಿಸಿದ್ದೆವು. ಎಲ್ಲಿ ನಿಲ್ಲಿಸಿದ್ದೇವೋ ಈಗ ಅಲ್ಲಿಂದ ಮತ್ತೆ ಆರಂಭಿಸುತ್ತಿದ್ದೇವೆ ಎಂದಿದ್ದಾರೆ.

ಇದು ಪಕ್ಷಾತೀತ ಹೋರಾಟ. ಈ ಹೋರಾಟದ ಮುಂದಾಳತ್ವವನ್ನು ಕಾಂಗ್ರೆಸ್ ಪಕ್ಷ ವಹಿಸಿಕೊಂಡಿದೆ. ಎಲ್ಲ ಅಪಾರ್ಟ್ಮೆಂಟ್ ಸಂಘಗಳು, ಕಾರ್ಮಿಕ, ಕೈಗಾರಿಕಾ ಸಂಘಟನೆ, ಎನ್ಜಿಓ, ಚಿತ್ರರಂಗದ ಎಲ್ಲ ವಿಭಾಗದವರು, ಧರ್ಮಗುರುಗಳು, ಜನಸಾಮಾನ್ಯರು ಈ ಪಾದಯಾತ್ರೆಯಲ್ಲಿ ಭಾಗವಹಿಸುತ್ತಿದ್ದಾರೆ. ನಾಳೆ ಬೆಳಗ್ಗೆ 9 ಗಂಟೆಗೆ ತಾಯಿ ಚಾಮುಂಡೇಶ್ವರಿಗೆ ಪೂಜೆ ನಂತರ ಪಾದಯಾತ್ರೆ ಆರಂಭವಾಗಲಿದೆ ಎಂದು ಡಿ.ಕೆ.ಶಿವಕುಮಾರ್‌ ಇದೇ ಸಂದರ್ಭದಲ್ಲಿ ತಿಳಿಸಿದರು.

ಮಾರ್ಚ್ 3 ರಂದು ಮಧ್ಯಾಹ್ನ ಪಾದಯಾತ್ರೆ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನ ತಲುಪಲಿದ್ದು, ಅಂದು ಇಲ್ಲಿ ಸಭೆ ನಡೆಸಲಾಗುವುದು. ಸಭೆಯ ಆಯೋಜನೆ ವಿಚಾರವಾಗಿ ನಾನು ಹಾಗೂ ಪಕ್ಷದ ನಾಯಕರಾದ ಬಿ.ಕೆ ಹರಿಪ್ರಸಾದ್, ರಾಮಲಿಂಗಾರೆಡ್ಡಿ, ಡಿ.ಕೆ. ಸುರೇಶ್ ಅವರ ಜತೆ ಇಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ನಾವು ಐದು ದಿನಗಳ ಕಾಲ ಬೆಂಗಳೂರು ನಗರದಲ್ಲಿ ಪಾದಯಾತ್ರೆ ಮಾಡಬೇಕಾಗಿತ್ತು, ಬಜೆಟ್ ಅಧಿವೇಶನ ಇರುವ ಕಾರಣ ಕೇವಲ 3 ದಿನ ಪಾದಯಾತ್ರೆ ಮಾಡುತ್ತೇವೆ. ಪಾದಯಾತ್ರೆಗೆ ಬರುವವರು ಮೆಟ್ರೋರೈಲು ಬಳಸಿಕೊಳ್ಳಲು ಅನುಕೂಲವಾಗುವಂತೆ ಈ ಸ್ಥಳ ಆಯ್ಕೆ ಮಾಡಿದ್ದೇವೆ ಎಂದು ಹೇಳಿದರು.

 

Share Post