ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಕಸರತ್ತು; 104 ಕ್ಷೇತ್ರಗಳಿಗೆ ಮೂಡುತ್ತಿಲ್ಲ ಒಮ್ಮತ
ಬೆಂಗಳೂರು; ಕಾಂಗ್ರೆಸ್‌ನಲ್ಲಿ ನಿನ್ನೆಯಿಂದ ಸ್ಕ್ರೀನಿಂಗ್ ಕಮಿಟಿ ಸಭೆ ನಡೆಯುತ್ತಿದೆ. ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಗೆ ಕಸರತ್ತು ನಡೆಯುತ್ತಿದೆ. ಆದ್ರೆ 104 ಕ್ಷೇತ್ರಗಳಲ್ಲಿ ಒಮ್ಮತದ ಅಭ್ಯರ್ಥಿಗಳನ್ನು ಫೈನಲ್ ಮಾಡಲು ಆಗದೇ ಕಾಂಗ್ರೆಸ್ ನಾಯಕರಿಗೆ ತಲೆನೋವು ತಂದಿದೆ. ಈ ಕ್ಷೇತ್ರಗಳಲ್ಲಿ ಎರಡರಿಂದ ಮೂವರು ಪ್ರಬಲ ಆಕಾಂಕ್ಷಿಗಳಿದ್ದಾರೆ. ಯಾರು ಹೆಸರು ಅಂತಿಮಗೊಳಿಸಿದರೂ ಸಮಸ್ಯೆಯಾಗುವ ಸಾಧ್ಯತೆ ಇದೆ. ಹೀಗಾಗಿ ಕಾಂಗ್ರೆಸ್ ನಾಯಕರು ತಲೆಬಿಸಿ ಮಾಡಿಕೊಂಡಿದ್ದಾರೆ.
ಇನ್ನೊಂದೆಡೆ ಟಿಕೆಟ್ ಫೈನಲ್ ಮಾಡಲು ಹೈಕಮಾಂಡ್ ಮೊರೆಹೋಗಲಾಗುತ್ತದೆ ಎಂದು ತಿಳಿದುಬಂದಿದೆ. ಪ್ರಬಲ ಪೈಪೋಟಿ ಇರುವ ಕ್ಷೇತ್ರಗಳ ಪಟ್ಟಿಯನ್ನು ಇಂದೇ ಹೈಕಮಾಂಡ್‌ಗೆ ರವಾನಿಸಿ, ಅಲ್ಲೇ ಅಂತಿಮ ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ. ಇನ್ನೊಂದೆಡೆ
ಕೆಲ ಪರಿಷತ್ ಸದಸ್ಯರು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಆದ್ರೆ ಅವರಿಗೆ ಸಚಿವ ಸ್ಥಾನ ನೀಡುವ ಭರವಸೆ ನೀಡಿ, ಪಕ್ಷ ಆಯ್ಕೆ ಮಾಡುವ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಮನವೊಲಿಸಲು ಪ್ರಯತ್ನ ಮಾಡಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗುತ್ತಿದೆ. ನಾಲ್ಕೈದು ಎಂಎಲ್‌ಸಿಗಳಿಗೆ ಕಾಂಗ್ರೆಸ್ ಸರ್ಕಾರ ಬಂದರೆ ಸಚಿವ ಸ್ಥಾನ ನೀಡಲಾಗುತ್ತದೆ ಎಂದು ತಿಳಿದುಬಂದಿದೆ. ಹಿರಿಯ ಹಾಗೂ ಪ್ರಬಲ ಸಮುದಾಯದ ಪರಿಷತ್ ಸದಸ್ಯರಿಗೆ ಈ ಸಚಿವ ಸ್ಥಾನ ನೀಡಲಾಗುತ್ತದೆ ಎಂದು ತಿಳಿದುಬಂದಿದೆ.