Bengaluru

ಉಕ್ರೇನ್ ನಲ್ಲಿರುವ ಉಳಿದ ವಿದ್ಯಾರ್ಥಿಗಳನ್ನು ರಾಜ್ಯಕ್ಕೆ ಸುರಕ್ಷಿತವಾಗಿ ಕರೆತರಲು ಕ್ರಮ: ಮುಖ್ಯಮಂತ್ರಿ ಬೊಮ್ಮಾಯಿ

ಬೆಂಗಳೂರು : ಉಕ್ರೇನ್ ನಲ್ಲಿರುವ ಇನ್ನುಳಿದ ವಿದ್ಯಾರ್ಥಿಗಳನ್ನು ರಾಜ್ಯಕ್ಕೆ ಸುರಕ್ಷಿತವಾಗಿ ಕರೆತರಲು ಕ್ರಮಕೈಗೊಳ್ಳುತ್ತಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಉಕ್ರೇನ್‌ನಲ್ಲಿ ಯುದ್ಧ ಭೀಕರತೆ ಅತಿಯಾಗಿದೆ. ಭಾರತೀಯ ವಿದ್ಯಾರ್ಥಿಗಳು ಆಹಾರ, ನೀರಿಗಾಗಿ ಪರದಾಡುವ ಸ್ಥಿತಿ ಎದುರಾಗಿದೆ. ಪೋಷಕರ ಆತಂಕ ಹೆಚ್ಚಾಗ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ವಿದ್ಯಾರ್ಥಿಗಳನ್ನು ವಾಪಸ್‌ ಕರೆಸಿಕೊಳ್ಳಲು ಸಿಎಂ ಕ್ರಮ ಕೈಗೊಂಡಿದ್ದಾರೆ.

ಪಶ್ಚಿಮ ಭಾಗದಲ್ಲಿದ್ದ ವಿದ್ಯಾರ್ಥಿಗಳು ರೊಮೆನಿಯಾ ಮೂಲಕ ಭಾರತಕ್ಕೆ ಮರಳಿದ್ದಾರೆ. ಮುಂಬೈ ಹಾಗೂ ನವದೆಹಲಿಗೆ ಆಗಮಿಸಿರುವ ವಿದ್ಯಾರ್ಥಿಗಳನ್ನು ಬೆಂಗಳೂರಿಗೆ ಕರೆತರಲಾಗುತ್ತಿದೆ. ವಿಪತ್ತು ನಿರ್ವಹಣಾ ಇಲಾಖೆಯಿಂದಲೇ ವಿದ್ಯಾರ್ಥಿಗಳ ಪ್ರಯಾಣ ಹಾಗೂ ಇನ್ನಿತರ ವೆಚ್ಚಗಳನ್ನು ಭರಿಸಲಾಗುತ್ತಿದೆ ಎಂದು ತಿಳಿಸಿದರು.

ಉಕ್ರೇನ್ ನಿಂದ ಇನ್ನುಳಿದ ವಿದ್ಯಾರ್ಥಿಗಳನ್ನು ಕರೆತರಲು ಕೇಂದ್ರ ವಿದೇಶಾಂಗ ಸಚಿವರ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ. ಕೇಂದ್ರ ಹಾಗೂ ರಾಜ್ಯದ ಸಹಾಯವಾಣಿಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತಿವೆ. ಹಲವಾರು ವಿದ್ಯಾರ್ಥಿಗಳು ಹಾಗೂ ಪೋಷಕರ ಜೊತೆಗೆ ಚರ್ಚಿಸಲಾಗಿದೆ. ಉಕ್ರೇನ್ ನ ಕಾರ್ಕೈವ್ ನಲ್ಲಿ ಬಹಳಷ್ಟು ವಿದ್ಯಾರ್ಥಿಗಳು ಸಿಲುಕಿದ್ದು, ಅದೇ ಪ್ರದೇಶದಲ್ಲಿ ಪ್ರಸ್ತುತ ಯುದ್ಧ ನಡೆಯುತ್ತಿರುವುದಾಗಿ ತಿಳಿದುಬಂದಿದೆ. ಅಲ್ಲಿನ ಮೆಟ್ರೋ, ಬಂಕರ್ ಗಳಲ್ಲಿ ಬಹಳಷ್ಟು ಜನರನ್ನು ಇರಿಸಿರುವುದು ಆತಂಕದ ವಿಷಯ. ವಿದ್ಯಾರ್ಥಿಗಳ ಸುರಕ್ಷತೆಯ ಜೊತೆಗೆ ಊಟ ಮತ್ತು ನೀರಿನ ವ್ಯವಸ್ಥೆಯನ್ನು ಪೂರೈಸಲು ಕೇಂದ್ರ ವಿದೇಶಾಂಗ ಸಚಿವರನ್ನು ಮನವಿ ಮಾಡಲಾಗಿದೆ. ಯುದ್ಧದ ಪರಿಸ್ಥಿತಿ ತಿಳಿಗೊಳ್ಳುವ ತನಕ ವಿದ್ಯಾರ್ಥಿಗಳ ಸುರಕ್ಷತೆಗೆ ಆದ್ಯತೆ ನೀಡುವ ಜೊತೆಗೆ ಅವರನ್ನು ಭಾರತಕ್ಕೆ ಕರೆತರುವ ಬಗ್ಗೆಯೂ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ. ರಾಜ್ಯದ ಅಧಿಕಾರಿಗಳು ಈ ನಿಟ್ಟಿನಲ್ಲಿ ನಿರಂತರವಾಗಿ ಸಂಪರ್ಕದಲ್ಲಿ ಇದ್ದಾರೆ ಯಾರೂ ಭಯಪಡುವ ಅಗತ್ಯ ಇಲ್ಲ ಎಂಬ ಭರವಸೆಯನ್ನು ನೀಡಿದ್ರು.

Share Post