Bengaluru

ಉತ್ತರ ಕರ್ನಾಟಕದ ಜನರಿಗಾಗಿ ಬೆಂಗಳೂರಲ್ಲಿ 3 ಎಕರೆ ಜಾಗ; ಸಿಎಂ ಬೊಮ್ಮಾಯಿ

ಬೆಂಗಳೂರು: ಬೆಂಗಳೂರಿನಲ್ಲಿ ವಾಸವಾಗಿರುವ ಉತ್ತರ ಕರ್ನಾಟಕ ಭಾಗದ ಜನರ ಅನುಕೂಲಕ್ಕಾಗಿ 3 ಎಕರೆ ಜಾಗ ನೀಡುವುದಾಗಿ ಬೆಂಗಳೂರಿನಲ್ಲಿರುವ ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾ ಸಂಸ್ಥೆಯ ನಿಯೋಗಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.

ಬೆಂಗಳೂರಿನಲ್ಲಿರುವ ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾಸಂಸ್ಥೆಯ ಅಧ್ಯಕ್ಷ ಶಿವಕುಮಾರ ಮೇಟಿ ನೇತೃತ್ವದಲ್ಲಿ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಭೇಟಿ ಮಾಡಿ ಮನವಿ ಮಾಡಲಾಯಿತು. ಈ ವೇಳೆ ಸಿಎಂ ಮೂರು ಎಕರೆ ಜಮೀನು ನೀಡುವುದಾಗಿ ತಿಳಿಸಿದ್ದಾರೆ.

ಉತ್ತರ ಕರ್ನಾಟಕದ ಜನರ ಅನುಕೂಲಕ್ಕೆ ಕಟ್ಟಡ, ಆ ಭಾಗದಿಂದ ಬರುವ ವಿದ್ಯಾರ್ಥಿಗಳು ಮತ್ತು ಸಾಮಾನ್ಯ ಜನರಿಗೆ ಅನುಕೂಲವಾಗಲು ವಸತಿ ನಿಲಯ ನಿರ್ಮಾಣ ಮಾಡಲು ಶೀಘ್ರವೇ ಜಮೀನು ಮಂಜೂರು ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ. ಇದರೊಂದಿಗೆ ಉತ್ತರ ಕರ್ನಾಟಕ ಭಾಗದ ಪ್ರಮುಖ ಯೋಜನೆಗಳಿಗೆ ಬಜೆಟ್ ನಲ್ಲಿ ಆದ್ಯತೆ ನೀಡುವಂತೆ ನಿಯೋಗ ಮಾಡಿದ ಮನವಿಗೆ ಸಿಎಂ ಸಕಾರಾತ್ಮಕ ಸ್ಪಂದಿಸಿದರು.

ಮುಖ್ಯಮಂತ್ರಿಗಳ ಭೇಟಿಯ ನಿಯೋಗದಲ್ಲಿ ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾ ಸಂಸ್ಥೆ ಅಧ್ಯಕ್ಷ ಶಿವಕುಮಾರ ಮೇಟಿ, ಪದಾಧಿಕಾರಿಗಳಾದ ಬಸವರಾಜ ಬೇಳೂರು, ಶ್ರೀಧರ ಕಲ್ಲೂರು, ಗಂಗಾಧರ ವಾಲಿ, ಅಯ್ಯನಗೌಡ ಬಿರಾದಾರ, ಸಂತೋಷ ಬಸೆಟ್ಟಿ, ಭಿಮಣ್ಣ ನಲತ್ವಾಡ, ಪತ್ರಕರ್ತ ಶಂಕರ ಪಾಗೋಜಿ ಹಾಜರಿದ್ದರು.

Share Post