ಸಿದ್ದಗಂಗಾ ಮಠಕ್ಕೆ ಮೆಡಿಕಲ್ ಕಾಲೇಜು ಮಂಜೂರು ಮಾಡಿದ ಕೇಂದ್ರ ಸರ್ಕಾರ
ಬೆಂಗಳೂರು; ತ್ರಿವಿಧ ದಾಸೋಹದ ಮೂಲಕ ದೇಶಾದ್ಯಂತ ಭಕ್ತರನ್ನು ಹೊಂದಿರುವ ತುಮಕೂರಿನ ಸಿದ್ದಗಂಗಾ ಮಠಕ್ಕೆ ವೈದ್ಯಕೀಯ ಕಾಲೇಜು ಮಂಜೂರಾಗಿದೆ. ಸಿದ್ದಗಂಗಾ ಸಂಸ್ಥೆಯಿಂದ ಎಂಜಿಯರಿಂಗ್ ಸೇರಿ ಎಲ್ಲಾ ರೀತಿಯ ಶಿಕ್ಷಣ ಸಂಸ್ಥೆಗಳನ್ನು ನಡೆಸಲಾಗುತ್ತಿದೆ. ಆದ್ರೆ ವೈದ್ಯಕೀಯ ಶಿಕ್ಷಣಕ್ಕೆ ಅನುಮತಿ ಸಿಕ್ಕಿರಲಿಲ್ಲ. ಇದೀಗ ಕೇಂದ್ರ ಸರ್ಕಾರ ಸಿದ್ದಗಂಗಾ ಮಠಕ್ಕೆ ವೈದ್ಯಕೀಯ ಕಾಲೇಜು ಮುಂಜೂರು ಮಾಡಿದೆ.
ರಾಷ್ಟ್ರೀಯ ವೈದ್ಯಕೀಯ ಆಯೋಗ ‘ಸಿದ್ದಗಂಗಾ ವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆಗೆ ಮೊದಲ ವರ್ಷದ ಎಂಬಿಬಿಎಸ್ ತರಗತಿಗಳನ್ನು ಈ ಶೈಕ್ಷಣಿಕ ವರ್ಷದಿಂದಲೇ ಆರಂಭಿಸಲು ಅನುಮತಿ ನೀಡಿದೆ.
ಕಳೆದ ವರ್ಷ ರಾಜ್ಯ ಸರ್ಕಾರವು ಸಿದ್ದಗಂಗಾ ಮಠಕ್ಕೆ ಮೆಡಿಕಲ್ ಕಾಲೇಜ್ ಮಂಜೂರು ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿ ನಿರಪೇಕ್ಷಣಾ ಪತ್ರ ನೀಡಿತ್ತು. ಸಿದ್ದಗಂಗಾ ಮಠಕ್ಕೆ ಮೆಡಿಕಲ್ ಕಾಲೇಜು ಮಂಜೂರಾಗಿದ್ದರಿಂದ ತುಮಕೂರು ಜಿಲ್ಲೆಗೆ ಒಟ್ಟು 3 ಮೆಡಿಕಲ್ ಕಾಲೇಜು ಸಿಕ್ಕಂತಾಗಿದೆ. ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಅವರ ಸಂಸ್ಥೆಗೆ ಸೇರಿದ 2 ಮೆಡಿಕಲ್ ಕಾಲೇಜುಗಳು ಈಗಾಗಲೇ ಕಾರ್ಯಾರಂಭ ಮಾಡುತ್ತಿವೆ.