ಕೇಂದ್ರ ಸರ್ಕಾರದ ಅಲರ್ಟ್ ಮೆಸೇಜ್; ಗಲಿಬಿಲಿಯಾದ ಕಾಂಗ್ರೆಸ್ ನಾಯಕರು
ಬೆಂಗಳೂರು; ಇಂದು ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮ ನಡೆಯುತ್ತಿತ್ತು. ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಜಗದೀಶ್ ಶೆಟ್ಟರ್ ಸೇರಿದಂತೆ ಹಲವು ನಾಯಕರು ಇದ್ದರು. ಈ ವೇಳೆ ಇದ್ದಕ್ಕಿದ್ದಂತೆ ಎಲ್ಲರ ಮೊಬೈಲ್ಗಳಿಗೂ ಅಲರ್ಟ್ ಮೆಸೇಜ್ ಬಂತು. ಅದು ಕೇಂದ್ರ ಸರ್ಕಾರದ ದೂರ ಸಂಪರ್ಕ ಇಲಾಖೆಯಿಂದ ಬಂದ ಅಲರ್ಟ್ ಮೆಸೇಜ್ ಆಗಿತ್ತು. ಅದರ ಸೌಂಡ್ ಒಟ್ಟಿಗೆ ಎಲ್ಲರ ಮೊಬೈಲ್ನಲ್ಲೂ ಬರುತ್ತಿದ್ದಂತೆ ಕಾಂಗ್ರೆಸ್ ನಾಯಕರು ಮೊದಲಿಗೆ ಗಲಿಬಿಲಿಯಾದರು. ನಂತರ ಮಾಹಿತಿ ತಿಳಿದು ನಿರಾಳರಾದರು. ನಂತರ ನಗೆ ಚಟಾಕಿ ಹಾರಿಸಿದರು.
ದೇಶದಲ್ಲಿ ನೈಸರ್ಗಿಕ ವಿಕೋಪ ಅಥವಾ ಎಮರ್ಜೆನ್ಸಿ ಸಂದರ್ಭದ ಎದುರಾದಾಗ ಜನರಿಗೆ ಎಚ್ಚರಿಕೆ ಸಂದೇಶ ಕಳುಹಿಸುವ ಹೊಸ ಟೆಕ್ನಾಲಜಿಯ ಪ್ರಯೋಗ ನಡೆಯುತ್ತಿದೆ. ಅದರ ಭಾಗವಾಗಿ ಕೇಂದ್ರ ಸರ್ಕಾರದಿಂದ ಎಲ್ಲಾ ಮೊಬೈಲ್ಗಳಿಗೆ ತುರ್ತು ಸಂದೇಶ ರವಾನಿಸಲಾಗುತ್ತಿದೆ. ಅದು ಪ್ರಾಯೋಗಿಕ ತುರ್ತು ಸಂದೇಶವಾಗಿದೆ. ಎಮರ್ಜೆನ್ಸಿ ಅಲರ್ಟ್ ಮೆಸೇಜ್ ಹಾಗೂ ಬೀಪ್ ಸೌಂಡ್ ಬರುತ್ತದೆ. ಹೀಗೆ ಬಂದಾಗ ಯಾರೂ ಹೆದರಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಈಗಾಗಲೇ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಆದ್ರೂ ಇದ್ದಕ್ಕಿದ್ದಂತೆ ಇಂತಹ ಸಂದೇಶ ಬಂದಾಗ ಹೆದರಿಕೆಯಾಗುವುದು ಸಹಜ. ಅದರಂತೆ ಕಾಂಗ್ರೆಸ್ ಸಭೆ ವೇಳೆ ನಾಯಕರಿಗೆ ಒಂದೇ ಸಮಯಕ್ಕೆ ಇಂತ ಅಲರ್ಟ್ ಮೆಸೇಜ್ ಬಂದಿದೆ.
ಇದರಿಂದ ಕೆಲವರು ಆತಂಕಗೊಂಡಿದ್ದು ಈ ಶಬ್ಧ ಏನಿರಬಹುದು ಎಂದು ತಲೆಕೆಡಿಸಿಕೊಂಡಿದ್ದರು. ಅದೂ ಕೂಡಾ ಡಿಸಿಎಂ ಡಿಕೆ ಶಿವಕುಮಾರ್ ಅವರು ಭಾಷಣ ಮಾಡುತ್ತಿದ್ದ ವೇಳೆಯೇ ಈ ಮೆಸೇಜ್ ಬಂದಿದೆ. ಆಗ ಮಾಧ್ಯಮ ಪ್ರತಿನಿಧಿಗಳು, ಈ ಶಬ್ದ ವಿಕೋಪ ಮಾಹಿತಿ ಅಲಾರ್ಮ್ ಎಂದು ತಿಳಿಸಿದ್ದಾರೆ. ಈ ವೇಳೆ ಮಾತನಾಡಿರುವ ಡಿಕೆ ಶಿವಕುಮಾರ್ ಅವರು, ಬಿಜೆಪಿಯವರೂ ಅಲರ್ಟ್ ಆಗಲಿ ಬಿಡಿ ಎಂದು ನಗೆಚಟಾಕಿ ಹಾರಿಸಿದ್ದಾರೆ.