BengaluruPolitics

ಕಾವೇರಿ ನದಿ ನೀರು ಹಂಚಿಕೆ ವಿವಾದ; ರೈತ ಹಿತ ಕಾಪಾಡಲು ನಾವು ಬದ್ಧ ಎಂದ ಡಿ.ಕೆ.ಶಿವಕುಮಾರ್‌

ಬೆಂಗಳೂರು; ನಾವು ರಾಜ್ಯದ ರೈತರ ರಕ್ಷಣೆಗೆ ಬದ್ಧರಾಗಿದ್ದೇವೆ. ನಮ್ಮ ರೈತರ ಹಿತರಕ್ಷಣೆ ಹೇಗೆ ಮಾಡಬೇಕು ಅನ್ನೋದು ನಮಗೆ ಗೊತ್ತಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ಪ್ರತಿದಿನ 25 ಸಾವಿರ ಕ್ಯೂಸೆಕ್‌ ನೀರು ಬಿಡುವಂತೆ ತಮಿಳುನಾಡು ಕೇಳಿಕೊಂಡಿತ್ತು. ಆದ್ರೆ ನಾವು ಕೇವಲ 3 ಸಾವಿರ ಕ್ಯೂಸೆಕ್‌ ಬಿಡುತ್ತೇವೆ ಎಂದು ಹೇಳಿದ್ದೆವು ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಮಳೆಯಾಗಿಲ್ಲ. ಹೀಗಾಗಿ ರಾಜ್ಯದ ಪರಿಸ್ಥಿತಿ ಏನಿದೆ ಎಂಬುದನ್ನು ಕಾವೇರಿ ನೀರು ನಿರ್ವಹಣಾ ಸಮಿತಿ ಹಾಗೂ ಕೋರ್ಟ್‌ ಮುಂದೆ ನಾವು ಮನವರಿಕೆ ಮಾಡಿಕೊಟ್ಟಿದ್ದೇವೆ. ತಮಿಳುನಾಡು ಕೇಳಿದಂತೆ ದಿನಕ್ಕೆ 25 ಸಾವಿರ ಕ್ಯೂಸೆಕ್‌ ನೀರು ಬಿಡಲಾಗುವುದಿಲ್ಲ. 3 ಸಾವಿರ ಕ್ಯೂಸ್‌ ನೀರು ಬಿಡುತ್ತೇವೆ ಎಂದು ಹೇಳಿದ್ದೆವು. ಆದ್ರೆ ಕಾವೇರಿ ನೀರು ನಿರ್ವಹಣಾ ಸಮಿತಿ 5 ಸಾವಿರ ಕ್ಯೂಸೆಕ್‌ ನೀರು ಬಿಡುವಂತೆ ಸೂಚನೆ ಕೊಟ್ಟಿದೆ. ನಾವು ಇದರ ವಿರುದ್ಧವೂ ಅಪೀಲ್‌ ಹೋಗುತ್ತೇವೆ. ಯಾಕಂದ್ರೆ, ನಮ್ಮಲ್ಲಿ ಸರಿಯಾಗಿ ಮಳೆಯಾಗಿಲ್ಲ. ನಮಗೇ ನೀರಿಲ್ಲ ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.

ಈ ವಿಚಾರದಲ್ಲಿ ಜೆಡಿಎಸ್‌ ಹಾಗೂ ಬಿಜೆಪಿ ಪಕ್ಷಗಳು ರಾಜಕೀಯ ಮಾಡುತ್ತಿವೆ. ಜೆಡಿಎಸ್‌, ಬಿಜೆಪಿ ಅಧಿಕಾರ ಮಾಡುವ ಸಂದರ್ಭದಲ್ಲೂ ಇಂತಹ ಪರಿಸ್ಥಿತಿಗಳು ಎದುರಾಗಿದ್ದವು. ಆಗ ನಾವು ರಾಜಕೀಯ ಮಾಡಿರಲಿಲ್ಲ. ಪರಿಸ್ಥಿತಿ ಏನು ಅನ್ನೋದು ಅವರಿಗೂ ಗೊತ್ತಿದೆ. ಆದರೂ ಅವರು ರಾಜಕೀಯ ಮಾಡುತ್ತಿದ್ದಾರೆ, ಮಾಡಲಿ ಬಿಡಿ ಎಂದು ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಇನ್ನು ಕಾವೇರಿ ನೀರಿಗಾಗಿ ಕೆಲ ಸಂಘಟನೆಗಳ ಹೋರಾಟದ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿ.ಕೆ.ಶಿವಕುಮಾರ್‌ ಅವರು, ನಾವು ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ಮಾಡಿದಾಗ ಈ ಸಂಘಟನೆಗಳು ಎಲ್ಲಿ ಹೋಗಿದ್ದವು ಎಂದು ಪ್ರಶ್ನೆ ಮಾಡಿದ್ದಾರೆ. ಕಾವೇರಿ ಸಮಸ್ಯೆಗೆ ಪರಿಹಾರ ಮೇಕೆದಾಟು ಯೋಜನೆ. ಆದ್ರೆ ನಾವು ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ಮಾಡಿದಾಗ ಯಾವ ಸಂಘಟನೆಗಳೂ ಬೆಂಬಲಿಸಲಿಲ್ಲ ಎಂದರು.

ಕೇಂದ್ರದಲ್ಲಿ ನಿಮ್ಮದೇ ಸರ್ಕಾರ ಇದೆ. ಮೇಕೆದಾಟು ಯೋಜನೆಗೆ ಮಂಜೂರಾತಿ ಕೊಡಿಸಿ ನೋಡೋಣ ಎಂದು ಬಿಜೆಪಿ ನಾಯಕರು ಡಿ.ಕೆ.ಶಿವಕುಮಾರ್‌ ಇದೇ ವೇಳೆ ಸವಾಲು ಹಾಕಿದರು.

Share Post