BengaluruPolitics

ಕರೆಂಟ್‌ ಕಳ್ಳ ಕುಮಾರಸ್ವಾಮಿ ಪೋಸ್ಟರ್‌ ಅಂಟಿಸಿದ ಪ್ರಕರಣ; ಮೂವರ ವಿರುದ್ಧ ಎಫ್‌ಐಆರ್‌

ಬೆಂಗಳೂರು; ದೀಪಾವಳಿ ದಿನ ಮಾಜಿ ಸಿಎಂ ಕುಮಾರಸ್ವಾಮಿಯವರ ನಿವಾಸಕ್ಕೆ ವಿದ್ಯುತ್‌ ದೀಪಾಲಂಕಾರ ಮಾಡಲಾಗಿತ್ತು. ಅದಕ್ಕೆ ಅಕ್ರಮವಾಗಿ ವಿದ್ಯುತ್‌ ಸಂಪರ್ಕ ಪಡೆಯಲಾಗಿತ್ತು ಎಂದು ಕಾಂಗ್ರೆಸ್‌ ಆರೋಪ ಮಾಡಿತ್ತು. ಇದಾದ ನಂತರ ಕುಮಾರಸ್ವಾಮಿಯವರು ಸಮಜಾಯಿಷಿ ನೀಡಿದ್ದರು. ದಂಡ ಹಾಕಿದರೆ ಕಟ್ಟುತ್ತೇನೆ ಎಂದು ಹೇಳಿದ್ದರು. ಹೀಗಿದ್ದರೂ, ಮೊನ್ನೆ ರಾತ್ರಿ ಜೆಡಿಎಸ್‌ ಕಚೇರಿಯ ಗೋಡೆಗಳ ಮೇಲೆ ಪೋಸ್ಟರ್‌ ಅಂಟಿಸಲಾಗಿತ್ತು. ಆ ಪೋಸ್ಟರ್‌ಗಳ ಮೇಲೆ ಕರೆಂಟ್‌ ಕಳ್ಳ ಕುಮಾರಸ್ವಾಮಿ ಎಂದು ಬರೆಯಲಾಗಿತ್ತು.

ಈ ವಿಚಾರವಾಗಿ ಈಗ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲು ಮಾಡಲಾಗಿದೆ. ಜೆಡಿಎಸ್‌ ನಗರ ಘಟಕದ ಅಧ್ಯಕ್ಷ ಎಚ್‌.ಎಂ.ರಮೇಶ್‌ಗೌಡ ಅವರು ನೀಡಿದ ದೂರಿನ ಮೇರೆಗೆ ಶ್ರೀರಾಂಪುರ ಠಾಣೆಯಲ್ಲಿ ಬಿಂದು, ನವೀನ್‌ಗೌಡ ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.

‘ನವೆಂಬರ್‌ 14ರಂದು ರಾತ್ರಿ 10 ಗಂಟೆ ಸುಮಾರಿಗೆ ಆಟೊದಲ್ಲಿ ಬಂದ ನಾಲ್ವರು ಜೆಡಿಎಸ್‌ ಪಕ್ಷ ಹಾಗೂ ಪಕ್ಷದ ಮುಖಂಡರ ವಿರುದ್ಧ ಘೋಷಣೆ ಕೂಗಿದ್ದಾರೆ. ಪ್ರಶ್ನಿಸಲು ಮುಂದಾದ ಭದ್ರತಾ ಸಿಬ್ಬಂದಿ ಮಹಾದೇವ್‌ ರುವಾನಿ ಅವರನ್ನು ನಿಂದಿಸಿ ಹಲ್ಲೆ ನಡೆಸಿ ಪರಾರಿಯಾಗಿದ್ಧಾರೆ. ರುವಾನಿಗೆ ಪ್ರಾಣ ಬೆದರಿಕೆ ಹಾಕಿದ್ದಾರೆ. ನವೀನ್‌ಗೌಡ ಹಾಗೂ ಬಿಂದು ಸಾಮಾಜಿಕ ಜಾಲತಾಣದಲ್ಲೂ ಕೀಳು ರೀತಿಯಲ್ಲಿ ಪೋಸ್ಟ್‌ ಹರಿಯಬಿಡುತ್ತಿದ್ದಾರೆ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಮಾಹಿತಿ ತಿಳಿದು ಸ್ಥಳಕ್ಕೆ ತೆರಳಿದ್ದ ಪೊಲೀಸರು ಮಂಗಳವಾರ ರಾತ್ರಿಯೇ ಪೋಸ್ಟರ್‌ ತೆರವುಗೊಳಿಸಿದ್ದರು.

Share Post