BengaluruPolitics

ನಾಳೆ ಸಂಜೆ 6ಕ್ಕೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ; ಈ ಮೂವರಲ್ಲಿ ಯಾರು ವಿಪಕ್ಷ ನಾಯಕ..?

ಬೆಂಗಳೂರು; ನಾಳೆ ಸಂಜೆ ಆರು ಗಂಟೆಗೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಕೂಡಾ ಪಾಲ್ಗೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆ. ನಾಳೆಯ ಸಭೆಯಲ್ಲಿ ಪ್ರತಿಪಕ್ಷ ನಾಯಕಯ ಆಯ್ಕೆ ಬಹುತೇಕ ಖಚಿತ ಎಂದು ಹೇಳಲಾಗುತ್ತಿದ್ದು, ಈ ಕಾರಣಕ್ಕಾಗಿ ಈ ಸಭೆ ಮಹತ್ವ ಪಡೆದುಕೊಂಡಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನವನ್ನು ಲಿಂಗಾತರಾದ ವಿಜಯೇಂದ್ರ ಅವರಿಗೆ ನೀಡಲಾಗಿದೆ. ಹೀಗಾಗಿ ವಿಪಕ್ಷ ನಾಯಕ ಸ್ಥಾನವನ್ನು ಒಕ್ಕಲಿಗ ಅಥವಾ ಹಿಂದುಳಿದ ವರ್ಗದ ನಾಯಕನಿಗೆ ನೀಡಲು ಬಿಜೆಪಿ ಹೈಕಮಾಂಡ್‌ ಚಿಂತನೆ ನಡೆಸಿದೆ. ಆರ್‌.ಅಶೋಕ್‌, ಡಾ.ಸಿ.ಎನ್‌.ಅಶ್ವತ್ಥನಾರಾಯಣ ಹಾಗೂ ವಿ.ಸುನೀಲ್‌ ಕುಮಾರ್ ಮೂವರಲ್ಲಿ ಒಬ್ಬರಿಗೆ ವಿಪಕ್ಷ ನಾಯಕನ ಸ್ಥಾನ ಸಿಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಒಕ್ಕಲಿಗ ಸಮುದಾಯಕ್ಕೆ ವಿಪಕ್ಷ ನಾಯಕನ ಸ್ಥಾನ ನೀಡುವುದಾದರೆ ಆರ್‌.ಅಶೋಕ್‌ ಅಥವಾ ಅಶ್ವತ್ಥನಾರಾಯಣ್‌ ಅವರಿಗೆ ಈ ಸ್ಥಾನ ಒಲಿಯುವ ಸಾಧ್ಯತೆ ಇದೆ. ಹಿಂದುಳಿದ ವರ್ಗಕ್ಕೆ ನೀಡುವುದಾದರೆ, ಈಡಿಗ ಬಿಲ್ಲವ ಸಮುದಾಯದ ವಿ.ಸುನಿಲ್‌ ಕುಮಾರ್‌ಗೆ ಈ ಸ್ಥಾನ ಸಿಗಲಿದೆ.

ಒಂದು ವೇಳೆ ವಿಧಾನಸಭೆ ವಿಪಕ್ಷ ನಾಯಕನ ಸ್ಥಾನವನ್ನು ಒಕ್ಕಲಿಗರಿಗೆ ನೀಡಿದರೆ, ಪರಿಷತ್‌ ವಿಪಕ್ಷ ನಾಯಕನ ಸ್ಥಾನವನ್ನು ಈಡಿಗ ಬಿಲ್ಲವ ಸಮುದಾಯದ ಶ್ರೀನಿವಾಸ ಪೂಜಾರಿಗೆ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ವಿಧಾನಸಭೆ ವಿಪಕ್ಷ ನಾಯಕನ ಸ್ಥಾನ ಈಡಿಗ ಬಿಲ್ಲವ ಸಮುದಾದ ಸುನಿಲ್‌ ಕುಮಾರ್‌ಗೆ ಕೊಟ್ಟರೆ, ಪರಿಷತ್‌ ವಿಪಕ್ಷ ನಾಯಕನ ಸ್ಥಾನವನ್ನು ರವಿಕುಮಾರ್‌ಗೆ ನೀಡುತ್ತಾರೆ ಎಂದು ಹೇಳಲಾಗುತ್ತಿದೆ.

ಕೇಂದ್ರದಿಂದ ಬರುವ ವೀಕ್ಷಕರು ನಾಳಿನ ಸಭೆಯಲ್ಲಿ ಶಾಸಕರ ಅಭಿಪ್ರಾಯ ಸಂಗ್ರಹಿಸುತ್ತಾರೆ. ವಿಪಕ್ಷನ ನಾಯಕನ ಹೆಸರು ನಾಳೆಯೇ ಫೈನಲ್‌ ಆದರೂ ಕೂಡಾ ನಾಳೆಯೇ ಘೋಷಣೆ ಮಾಡುವುದು ಡೌಟು. ವಿಜಯೇಂದ್ರ ಅವರು ಮುಂದಿನ ವಾರ ದೆಹಲಿಗೆ ಹೋಗಲಿದ್ದು, ಅಲ್ಲಿ ವಿಜಯೇಂದ್ರ ವರಿಷ್ಠರ ಜೊತೆ ಚರ್ಚಿಸಿದ ನಂತರ ಹೆಸರು ಘೋಷಣೆಯಾಗಲಿದೆ ಎಂದು ಹೇಳಲಾಗುತ್ತಿದೆ.

 

Share Post