ಮುಂದಿನ ತಿಂಗಳು ರಾಜ್ಯಾದ್ಯಂತ ನಮ್ಮ ಕ್ಲಿನಿಕ್ ಓಪನ್; ಸಚಿವ ಸುಧಾಕರ್
ಬೆಂಗಳೂರು; ಅಕ್ಟೋಬರ್ ಅಂತ್ಯದ ವೇಳೆ ನಮ್ಮ ಕ್ಲಿನಿಕ್ ಗಳು ರಾಜ್ಯಾದ್ಯಂತ ಸಂಪೂರ್ಣವಾಗಿ ಕಾರ್ಯ ನಿರ್ವಹಿಸಲಿವೆ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ. ನಮ್ಮ ಕ್ಲಿನಿಕ್ ಯೋಜನೆ ಕೂಡಲೇ ಸ್ಥಗಿತ ಮಾಡಬೇಕು ಎಂದು ಜೆಡಿಎಸ್ ಸದಸ್ಯ ಮಂಜೇಗೌಡ ವಿಧಾನ ಪರಿಷತ್ ಪ್ರಶ್ನೋತ್ತರ ಅವಧಿಯಲ್ಲಿ ಪ್ರಶ್ನೆ ಕೇಳಿದರು. ಈಗಾಗಲೇ ಇರುವ ಸರ್ಕಾರಿ ಆಸ್ಪತ್ರೆಗೆ ವೈದ್ಯರ ಕೊರತೆ ಇದೆ. ಸರ್ಕಾರಿ ಆಸ್ಪತ್ರೆಗಳು ಗುಣಮಟ್ಟದಲ್ಲಿ ಕೆಲಸ ಮಾಡ್ತಿಲ್ಲ. ಈಗ ಹೊಸದಾಗಿ ನಮ್ಮ ಕ್ಲಿನಿಕ್ ಸ್ಥಾಪನೆಗೆ 150 ಕೋಟಿ ಯಾಕೆ ಅಂತ ಪ್ರಶ್ನೆ ಮಾಡಿದರು. ಕೂಡಲೇ ಯೋಜನೆ ಕೈ ಬಿಡುವಂತೆ ಒತ್ತಾಯ ಮಾಡಿದರು.
ಇದಕ್ಕೆ ಉತ್ತರ ನೀಡಿದ ಸಚಿವರು, ನಗರದ ಭಾಗದಲ್ಲಿ 438 ನಮ್ಮ ಕ್ಲಿನಿಕ್‌ಗಳನ್ನು ಪ್ರಾರಂಭ ಮಾಡಲಾಗ್ತಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 243 ಕ್ಲಿನಿಕ್ ಪ್ರಾರಂಭ ಮಾಡುತ್ತೇವೆ. ರಾಜ್ಯದ ಇತರೆ ಭಾಗದಲ್ಲಿ 195 ಕ್ಲಿನಿಕ್ ಗಳನ್ನು ತೆರೆಯಲಾಗುತ್ತದೆ ಎಂದು ಹೇಳಿದರು.
ನಮ್ಮ ಕ್ಲಿನಿಕ್‌ನಲ್ಲಿ 12 ಸೇವೆಗಳು ಲಭ್ಯವಿರಲಿವೆ. ಇದಕ್ಕಾಗಿ 155 ಕೋಟಿ ಹಣ ಸರ್ಕಾರದಿಂದ ಮೀಸಲು ಇಡಲಾಗಿದೆ ಎಂದು ಮಾಹಿತಿ ನೀಡಿದರು. ನಗರ ಭಾಗದ ಕೊಳಗೇರಿ, ಬಡ ವರ್ಗದ ಜನರಿಗೆ ಅನುಕೂಲ ಆಗಲು ಈ ಕ್ಲಿನಿಕ್ ಪ್ರಾರಂಭ ಮಾಡಲಾಗುತ್ತಿದೆ. ಅಕ್ಟೋಬರ್ ಅಂತ್ಯದ ಒಳಗೆ ರಾಜ್ಯದಲ್ಲಿ ಎಲ್ಲಾ 438 ಕ್ಲಿನಿಕ್ ಆರಂಭ ಆಗುತ್ತೆ ಎಂದು ತಿಳಿಸಿದರು.