ಬಿಜೆಪಿ ಜನ ಜಾಗೃತಿ ಅಭಿಯಾನ; ಶಾಸಕರಾದ ಎಸ್.ಟಿ.ಸೋಮಶೇಖರ್, ಹೆಬ್ಬಾರ್ ಗೈರು
ಬೆಂಗಳೂರು; ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಮತದಾರರ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಇದರ ಭಾಗವಾಗಿ ಇಂದು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸಭೆ ಕರೆಯಲಾಗಿತ್ತು. ಸಂಸದರು, ಶಾಸಕರು, ಪರಾಜಿತ ಅಭ್ಯರ್ಥಿಗಳು ಹಾಗೂ ಪದಾಧಿಕಾರಿಗಳನ್ನು ಸಭೆಗೆ ಆಹ್ವಾನಿಸಲಾಗಿತ್ತು. ಆದ್ರೆ ಈ ಸಭೆಗೆ ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್ ಹಾಗೂ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಗೈರು ಹಾಜರಾಗಿದ್ದರು. ಅಷ್ಟೇ ಅಲ್ಲ, ಮಾಜಿ ಸಚಿವರಾದ ಶಂಕರ ಪಾಟೀಲ್ ಮುನೇನಕೊಪ್ಪ, ವಿ ಸೋಮಣ್ಣ ಕೂಡಾ ಸಭೆಯಲ್ಲಿ ಭಾಗವಹಿಸಿರಲಿಲ್ಲ.
ಶಾಸಕರಾದ ಸೋಮಶೇಖರ್, ಶಿವರಾಮ್ ಹೆಬ್ಬಾರ್ ಅವರು ಕಾಂಗ್ರೆಸ್ ಸೇರುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಹೀಗಾಗಿ ಇಂದಿನ ಈ ಸಭೆಗೆ ಅವರು ಗೈರಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ. ಅದೂ ಕೂಡಾ ಇಂದಿನ ಬಿಜೆಪಿ ಸಭೆಯಲ್ಲಿ ಬಿ.ಎಲ್.ಸಂತೋಷ್ ಭಾಗವಹಿಸಿದ್ದರು. ಈ ಸಭೆಗೆ ಶಾಸಕರು ಬಾರದೇ ಇದ್ದದ್ದು ಬೇರೆಯದೇ ಸಂದೇಶ ರವಾನಿಸಿದಂತಿತ್ತು.
ಕೇಂದ್ರ ಸಚಿವ ನಾರಾಯಣಸ್ವಾಮಿ, ಸಂಸದರಾದ ಡಿ.ವಿ. ಸದಾನಂದ ಗೌಡ, ತೇಜಸ್ವಿ ಸೂರ್ಯ, ಈರಣ್ಣ ಕಡಾಡಿ, ಶಾಸಕರಾದ ರಮೇಶ್ ಜಾರಕಿಹೊಳಿ, ಶ್ರೀವತ್ಸ ಮುಂತಾದವರು ಸಭೆಯಲ್ಲಿದ್ದರು.