BengaluruPolitics

ಯತೀಂದ್ರ ಸಿದ್ದರಾಮಯ್ಯ ವಿಡಿಯೋ ವಿಚಾರ; ಪ್ರಕರಣದ ಫುಲ್‌ ಡಿಟೇಲ್ಸ್‌ ಇಲ್ಲಿದೆ!

ಬೆಂಗಳೂರು; ಸಿಎಂ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ಮಾತನಾಡಿರುವ ವಿಡಿಯೋ ಕರ್ನಾಟಕದಲ್ಲಿ ಸಾಕಷ್ಟು ರಾಜಕೀಯ ಚರ್ಚೆಯನ್ನು ಹುಟ್ಟುಹಾಕಿದೆ. ಆರೋಪ ಪ್ರತ್ಯಾರೋಪಗಳಿಗೂ ಸಾಕ್ಷಿಯಾಗಿದೆ. ವರುಣಾ ಕ್ಷೇತ್ರದಲ್ಲಿ ನಡೆದ ಸಸಭೆಯ ವೇಳೆ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರು ತಮ್ಮ ತಂದೆ, ಸಿಎಂ ಸಿದ್ದರಾಮಯ್ಯ ಅವರ ಜೊತೆ ಫೋನ್‌ನಲ್ಲಿ ಮಾತನಾಡುತ್ತಾ, ನಾನು ಹೇಳಿದ ನಾಲ್ಕೈದು ಹೆಸರುಗಳನ್ನಷ್ಟೇ ಫೈನಲ್‌ ಮಾಡಿ ಎಂದು ಹೇಳುತ್ತಾರೆ. ಆಗ ವಿವೇಕಾನಂದ ಹಾಗೂ ಮಹದೇವ್‌ ಎಂಬುವವರ ಹೆಸರುಗಳು ಪ್ರಸ್ತಾಪವಾಗುತ್ತವೆ.

ಏನಿದು ವಿವಾದ?, ವಿಡಿಯೋದಲ್ಲೇನಿದೆ..?
ಬುಧವಾರ ಯತೀಂದ್ರ ಅವರು ವರುಣ ಕ್ಷೇತ್ರ ವ್ಯಾಪ್ತಿಯ ಮೈಸೂರು ತಾಲೂಕಿನ ಚಟ್ನಹಳ್ಳಿಪಾಳ್ಯ ಗ್ರಾಮದಲ್ಲಿ ಸಾರ್ವಜನಿಕ ಕುಂದುಕೊರತೆ ವಿಚಾರಣೆ ಸಭೆ ನಡೆಸಿ ಗ್ರಾಮದ ಜನರ ಅಹವಾಲು ಸ್ವೀಕರಿಸುತ್ತಿದ್ದರು. ಈ ವೇಳೆ ಅವರು ತಂದೆ ಸಿದ್ದರಾಮಯ್ಯಗೆ ಕರೆ ಮಾಡಿದ್ದಾರೆ. ಯಾವುದೋ ವಿಷಯವನ್ನು ಪ್ರಸ್ತಾಪ ಮಾಡಿದ ಅವರು, ನಾನು ನೀಡಿದ ಲಿಸ್ಟ್‌ನದ್ದು ಮಾತ್ರ ಮಾಡಿ ಎಂದು ಸಾರ್ವಜನಿಕರ ಮುಂದೆಯೇ ತಾನು ನೀಡಿದ ಪಟ್ಟಿಯ ಬಗ್ಗೆ ಮಾತುಕತೆ ಮಾಡಿದ್ದಾರೆ. ಆರಂಭದಲ್ಲಿ ಅಪ್ಪ ಹೇಳಿ ಅಂತಾ ಯತೀಂದ್ರ ಸಿದ್ದರಾಮಯ್ಯ ಮಾತು ಶುರುಮಾಡಿದ್ದಾರೆ. ಈ ವೇಳೆ “ವಿವೇಕಾನಂದ ಯಾರು?” ಎಂದು ಸಿಎಂ ಪ್ರಶ್ನೆ ಕೇಳಿದ್ದಾರೆ. ಆಗ ಯತೀಂದ್ರ, ಆ ಮಹದೇವ್‌ ಅವರಿಗೆ‌ ಪೋನ್ ನೀಡುವಂತೆ ಸಿಎಂಗೆ ಹೇಳುತ್ತಾರೆ. ಮಹದೇವ್‌ಗೆ ಫೋನ್ ಕೊಟ್ಟ ತಕ್ಷಣ ಅವರನ್ನು ತರಾಟೆ ತೆಗೆದುಕೊಂಡ ಯತೀಂದ್ರ, ನಾನು ಕೊಟ್ಟಿದ್ದು ಬಿಟ್ಟು ಬೇರೆ ಯಾವುದು ಅದು ಅಂತಾ ಪ್ರಶ್ನಿಸಿದ್ದಾರೆ. ನನಗೆ ಅದೆಲ್ಲಾ ಗೊತ್ತಿಲ್ಲ‌. ನಾನು ಕೊಟ್ಟಿರುವ ನಾಲ್ಕು, ಐದು ಮಾತ್ರ ಮಾಡುವಂತೆ ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ.

ಯಾರು ಈ ಮಹದೇವ..?
ಅಂದಹಾಗೆ, ಆರ್‌.ಮಹದೇವ್‌ ಎಂಬುವವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಶೇಷ ಕರ್ತವ್ಯಾಧಿಕಾರಿಯಾಗಿದ್ದಾರೆ. ಇವರು ಈ ಮೊದಲು ಸಬ್‌ ರಿಜಿಸ್ಟ್ರಾರ್‌ ಆಗಿದ್ದರು. ಮಹದೇವ್‌ ಅವರು ಯತೀಂದ್ರ ಸಿದ್ದರಾಮಯ್ಯ ಅವರಿಗೆ ಆಪ್ತರು ಹಾಗೂ ಸಂಬಂಧಿ ಎಂದು ಹೇಳಲಾಗುತ್ತಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಶೇಷ ಕರ್ತವ್ಯಾಧಿಕಾರಿ ಮಹದೇವ್‌ ಅವರ ವಿರುದ್ಧ ಹಲವು ಸಚಿವರು ಕೂಡಾ ಈ ಹಿಂದೆ ಆರೋಪಗಳನ್ನು ಮಾಡಿದ್ದರು. ವರ್ಗಾವಣೆ ವಿಚಾರವಾಗಿ ಕೆಲ ಸಚಿವರು ಮಹದೇವ್‌ ವಿರುದ್ಧ ಗರಂ ಆಗಿದ್ದರು ಎಂದು ತಿಳಿದುಬಂದಿದೆ. ಕಾರ್ಮಿಕ ಇಲಾಖೆಯಲ್ಲೂ ಮಹದೇವ್‌ ಮಧ್ಯಪ್ರವೇಶ ಮಾಡಿದ್ದರು ಎಂದು ಸಚಿವ ಸಂತೋಷ್‌ ಲಾಡ್‌ ಆರೋಪ ಮಾಡಿದ್ದರು. ಈ ಬಗ್ಗೆ ಸಿಎಂ ಸಿದ್ದರಾಮಯ್ಯಗೆ ದೂರು ನೀಡಿದ್ದರು ಎನ್ನಲಾಗಿದೆ.

ಸಚಿವರಿಗೆ ಯಾವುದೇ ಮಾಹಿತಿ ನೀಡದೆ ಅಧಿಕಾರಿ ಮಹದೇವ್ ವರ್ಗಾವಣೆ ಪಟ್ಟಿ ರೆಡಿ ಮಾಡಿದ್ದರು. ಮುಖ್ಯಮಂತ್ರಿ ಅವರ ಒಪ್ಪಿಗೆ ಪಡೆದುಕೊಳ್ಳುವ ವೇಳೆ ಮಹದೇವ್‌ ಅವರು 40 ಮಂದಿಯ ಹೆಚ್ಚುವರಿ ಲಿಸ್ಟ್ ರೆಡಿ ಮಾಡಿದ್ದರು ಎನ್ನಲಾಗಿದೆ. ಮಹದೇವ್ ಅವರ ನಡೆಗೆ ಕೆಂಡಾಮಂಡಲರಾಗಿದ್ದ ಸಚಿವ ಸಂತೋಷ್ ಲಾಡ್, ಅವರನ್ನು ಹುದ್ದೆಯಿಂದ ತಕ್ಷಣ ಬದಲಾಯಿಸುವಂತೆ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದ್ದರು. ಯತೀಂದ್ರ ಅವರ ಲಿಸ್ಟ್‌ ವಿಚಾರದಲ್ಲೂ ಮಹದೇವ್‌ ಅದೇ ಕೆಲಸ ಮಾಡಿದ್ದು, ಯತೀಂದ್ರ ಕೋಪಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ಅಪ್ಪ ಕಲೆಕ್ಷನ್ ಕಿಂಗ್ , ಮಗ ಕಲೆಕ್ಷನ್ ಪ್ರಿನ್ಸ್; ಕುಮಾರಸ್ವಾಮಿ ಸಿಡಿಮಿಡಿ

ಇನ್ನು ಮಾಜಿ ಸಿಎಂ ಕುಮಾರಸ್ವಾಮಿ ಈ ವಿಚಾರಕ್ಕೆ ಸಿಡಿಮಿಡಿಗೊಂಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ಕರ್ನಾಟಕದಲ್ಲಿ ಅಪ್ಪ ಕಲೆಕ್ಷನ್ ಕಿಂಗ್ , ಮಗ ಕಲೆಕ್ಷನ್ ಪ್ರಿನ್ಸ್ ಎಂದು ಜರಿದಿದ್ದಾರೆ.

ಕಾಸಿಗಾಗಿ ಹುದ್ದೆ ಉರುಫ್ #CashForPosting ದಂಧೆ ಕರ್ನಾಟಕದಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ. ಎಗ್ಗಿಲ್ಲದೆ, ಲಜ್ಜೆಗೆಟ್ಟು ಸರ್ಕಾರ ಕೆಲಸ ಮಾಡುತ್ತಿದೆ. ಇದಕ್ಕೆ ಸಾಕ್ಷಿಯೇ ಯತೀಂದ್ರ ಅವರ ವಿಡಿಯೋ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್‌ ಸರ್ಕಾರದ ಬ್ಯುಸಿನೆಸ್‌ ಹಾದಿಬೀದಿಗೆ ಬಂದಿದೆ. ಅಪ್ಪ, ಮಗ ಇಬ್ಬರೂ ಸೇರಿ ಸಿಎಂ ಸಚಿವಾಲಯವನ್ನು ಸುಲಿಗೆ ಅಡ್ಡಾ ಮಾಡಿಕೊಂಡಿದ್ದಾರೆ. ಇದಕ್ಕೆ ಈ ವಿಡಿಯೋಗಿಂತ ಪುರಾವೆ ಬೇಕಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ರಾಜ್ಯದ ಮುಖ್ಯಮಂತ್ರಿಗೇ ಧಮ್ಕಿ ಹಾಕಿ, “ನಾನು ಹೇಳಿದವರಷ್ಟನ್ನೇ ಮಾಡಿ” ಎನ್ನುವ ಈ ವ್ಯಕ್ತಿ ಮುಖ್ಯಮಂತ್ರಿ ಮಗನೋ ಅಥವಾ ಕರ್ನಾಟಕದ ಸೂಪರ್ ಸಿಎಮ್ಮೋ? ಅಥವಾ ಮಿನಿಸ್ಟರ್ ಫಾರ್ ಕ್ಯಾಶ್ ಫಾರ್ ಪೋಸ್ಟಿಂಗಾ? ಎಂದೂ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ. ಇಲ್ಲವೇ ಒಳಾಡಳಿತ ಸಚಿವಾಲಯ ಮಾದರಿಯ ‘ಒಳ ವಸೂಲಿ ಸಚಿವಾಲಯ’ದ ಸಚಿವರಾ? ಸ್ವತಃ ಮುಖ್ಯಮಂತ್ರಿಯೇ ಫೋನ್ ಕೊಡುವಷ್ಟು ಪ್ರಭಾವಿಯಾದ ಆ ಭಾರೀ ಆಸಾಮಿ ಯಾರು? ಇಷ್ಟಕ್ಕೂ ಆ ಮಹದೇವ ಎನ್ನುವ ವ್ಯಕ್ತಿ ಯಾರು? ಎಂದೂ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.

ಮಗನ ವಿಡಿಯೋ ಬಗ್ಗೆ ಸಿದ್ದರಾಮಯ್ಯ ಸಮಜಾಯಿಷಿ
ಹೀಗಿರುವಾಗಲೇ ಮಗನ ವಿಡಿಯೋ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಸ್ಪಷ್ಟನೆ ಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿರುವ ಸಿದ್ದರಾಮಯ್ಯ ಅವರು, ಯತೀಂದ್ರ ಅವರು ಯಾವುದೇ ವರ್ಗಾವಣೆ ಬಗ್ಗೆ ಮಾತನಾಡಿಲ್ಲ. ಅವರು ಸಿಎಸ್‌ಆರ್‌ ಫಂಡ್‌ ಬಗ್ಗೆ ಮಾತನಾಡಿದ್ದಾರೆ. ಯತೀಂದ್ರ ಹೇಳಿದ್ದು ಸಿಎಸ್‌ಆರ್​ ಲಿಸ್ಟ್ ಬಗ್ಗೆ. ಶಾಲಾ ಕಟ್ಟಡಗಳನ್ನು ಸಿಎಸ್‌ಆರ್​ ಫಂಡ್​ನಿಂದ ರಿಪೇರಿ ಮಾಡಿಸಲಾಗುತ್ತಿದೆ. ಈ ವಿಚಾರವಾಗಿ ಮಾತನಾಡಿದ್ದಾರೆ.  ನನ್ನ ರಾಜಕೀಯ ಜೀವನದಲ್ಲಿ ವರ್ಗಾವಣೆ ದಂಧೆ ಮಾಡಿಲ್ಲ. ವರ್ಗಾವಣೆ ದಂಧೆ ಮಾಡಿದ್ದನ್ನು ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಸಿಎಸ್‌ಆರ್‌ ಫಂಡ್‌ ವಿಚಾರದ ಆದ್ರೆ ದಾಖಲೆ ಕೊಡಿ ಎಂದ ಕುಮಾರಸ್ವಾಮಿ

ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಮಾತನಾಡಿದ್ದು ರಾಜ್ಯದ CSR ಫಂಡಿನದ್ದೋ? ಅಥವಾ ವರುಣ ಕ್ಷೇತ್ರದ್ದೋ? ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ. ವರುಣಾದ ಸಿಎಸ್​ಆರ್ ಫಂಡ್ ಆಗಿದ್ದರೆ ವರುಣ ಕ್ಷೇತ್ರದ ಬಿಇಓ ಕಳಿಸಿರಬೇಕಲ್ಲ. ಮೈಸೂರು ಡಿಡಿಪಿಐ ಬಳಿ ಲಿಸ್ಟ್ ಇರಬೇಕಲ್ಲ. ಅದನ್ನು ಹೊರಗಿಡಿ ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಪಾಪ ಸಿಎಂ ಕಚೇರಿಗೆ ಬಂದು ಅದನ್ನ ಮಗನಿಗೆ ಕೇಳಿಕೊಂಡು ಮಾಡಬೇಕಾ? ಇಷ್ಟು ಭಂಡತನ ಬೇಡ. ಹಿಂದೆ ನಿಮ್ಮ ಪ್ರಾಮಾಣಿಕತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಈಗ ಹಳೆಯ ಸಿದ್ದರಾಮಯ್ಯ ಅಲ್ಲ ಅಂತ ನಿಮ್ಮವರೇ ಹೇಳುತ್ತಿದ್ದಾರೆ ಎಂದರು.

ಮಾಜಿ ಶಾಸಕ ಡಾ.ಯತೀಂದ್ರಗೆ ಫೋನ್ ಕರೆ ಮಾಡಿದ್ದು ಯಾರು? ಹಲೋ ಅಪ್ಪ ಅಂತಾ ಯತೀಂದ್ರ ಹೇಳಿದ್ದು ಯಾರಿಗೆ? ವಿವೇಕಾನಂದ ಯಾರು?, ನಾಲ್ಕೈದು ಲಿಸ್ಟ್​ ಕೊಟ್ಟಿದ್ದು ಏನು? ಸಿದ್ದರಾಮಯ್ಯ ಪುತ್ರ ಯತೀಂದ್ರಗೆ ಫೋನ್ ಮಾಡಿ ಕೇಳಿದ್ಯಾರು? ಅದು ಸಿಎಂ ಪರಿಹಾರ ನಿಧಿಯ ಹೆಸರುಗಳು? ಒಬ್ಬ ಮುಖ್ಯಮಂತ್ರಿ ಫೋನ್ ಮಾಡಿ ಲಿಸ್ಟ್ ಬಗ್ಗೆ ಮಾತಾಡುತ್ತಾರೆ. ಯಾರು ಮಹದೇವ?, ಯಾರು ಲೇಬರ್​ ಇನ್ಸ್​​ಪೆಕ್ಟರ್​ ಅವನು? ಆರ್​.ಮಹದೇವ್​ ಅವರದ್ದು ವಿಶೇಷ ಕರ್ತವ್ಯ ಏನು? ಸಾರ್ವಜನಿಕವಾಗಿ ಈ ರೀತಿಯಾದರೆ 4 ಗೋಡೆ ಮಧ್ಯೆ ಇನ್ನೇನು ಆಗುತ್ತಿದೆ? ಸಿಎಂ ಕೆಲಸ ಅಂದರೆ ಮಗನಿಗೆ ಫೋನ್​ ಮಾಡಿ ಕೇಳಬಹುದಾ? ಸಾರ್ವಜನಿಕರ ಹಣ ಲೂಟಿ ಮಾಡಿ ಎಂದು ಅಧಿಕಾರ ಕೊಟ್ಟಿದ್ದಾರಾ? ಫೋನ್ ಮಾಡಿ ಹೇಳಿದ್ದಾರಲ್ಲ ಅದರ ದಾಖಲೆ ಬಿಡುಗಡೆ ಮಾಡಿ. ಯಾವ ಶಾಲೆಗಳ ಸಿಎಸ್​​ಆರ್​ ಫಂಡ್​ ಅಂತಾ ಬಿಡುಗಡೆ ಮಾಡಲಿ ಎಂದೂ ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.

ಯತೀಂದ್ರರನ್ನು ಸಮರ್ಥಿಸಿಕೊಂಡ ಡಿಸಿಎಂ ಡಿ.ಕೆ.ಶಿವಕುಮಾರ್‌

ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರು ಆಶ್ರಯ ಸಮಿತಿ ಅಧ್ಯಕ್ಷರಾಗಿದ್ದು, ಈ ಕಾರಣಕ್ಕಾಗಿ ಜನ ಸಂಪರ್ಕ ಮಾಡಿದ್ದಾರೆ. ಅವರು ಈ ವೇಳೆ ಸ್ಕೂಲ್‌ಗಳ ರಿಪೇರಿಗಾಗಿ ಬಳಸುತ್ತಿರುವ ಸಿಎಎಸ್‌ಆರ್‌ ಫಂಡ್‌ ವಿಚಾರವಾಗಿ ಮಾತನಾಡಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಸಮಜಾಯಿಷಿ ನೀಡಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ನವರಿಗೆ ಬೇರೆ ಏನೂ ಕೆಲಸ ಇಲ್ಲ. ಇದಕ್ಕೆ ಏನೇನೋ ಬಣ್ಣ ಕಟ್ಟುತ್ತಿದ್ದಾರೆ. ಅಧಿಕಾರಿಗಳ ವರ್ಗಾವಣೆ ಎಲ್ಲಿ ನಡೆಯುತ್ತಿದೆ..? ಅದು ನಿಲ್ಲಿಸಿ ಎಷ್ಟು ದಿನ ಆಯ್ತು ಎಂದು ಡಿ.ಕೆ.ಶಿವಕುಮಾರ್‌ ಪ್ರಶ್ನೆ ಮಾಡಿದಾರೆ. ಸುಮ್ಮನೆ ವಿಪಕ್ಷಗಳ ನಾಯಕರು ಯತೀಂದ್ರ ಅವರನ್ನು ದೊಡ್ಡವರನ್ನಾಗಿ ಮಾಡುತ್ತಿದ್ದಾರೆ. ನಮ್ಮ ಹುಡುಗ ಬೆಳೆಯಲಿ ಬಿಡಿ ಎಂದೂ ಡಿಕೆಶಿ ಹೇಳಿದ್ದಾರೆ.

ಹೀಗೆ ಸಿಎಂ ಸಿದ್ದರಾಮಯ್ಯ ಅವರ ಪುತ್ರನ ವಿಡಿಯೋ ಕರ್ನಾಟಕದಲ್ಲಿ ಸಾಕಷ್ಟು ಸದ್ದು ಮಾಡಿದೆ. ಬಿಜೆಪಿ ನಾಯಕರಾದ ವಿಜಯೇಂದ್ರ, ಆರ್‌.ಅಶೋಕ್‌, ಅಶ್ವತ್ಥ ನಾರಾಯಣ ಸೇರಿದಂತೆ ಹಲವರು ಈ ಬಗ್ಗೆ ಮಾತನಾಡಿದ್ದಾರೆ. ವರ್ಗಾವಣೆ ದಂಧೆ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಆದ್ರೆ ಆಡಳಿತ ಪಕ್ಷದವರು ಮಾತ್ರ ಯತೀಂದ್ರ ವಿಡಿಯೋವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ.

 

Share Post