BengaluruPolitics

ವರುಣಾದಲ್ಲಿ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣಗೆ ಮೊದಲ ದಿನವೇ ಹಿನ್ನಡೆ

ಮೈಸೂರು; ಹೈಕಮಾಂಡ್‌ ಸೂಚನೆ ಹಿನ್ನೆಲೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ತೊಡೆ ತಟ್ಟಲು ಬಂದಿರುವ ಸಚಿವ ವಿ.ಸೋಮಣ್ಣಗೆ ಮೊದಲ ದಿನವೇ ಹಿನ್ನಡೆಯಾಗಿದೆ. ವರುಣಾ ಕ್ಷೇತ್ರದಲ್ಲಿ ಕಳೆದ 2018ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ತೋಟದಪ್ಪ ಬಸವರಾಜು ಅವರು ಪಕ್ಷ ತೊರೆದಿದ್ದಾರೆ. ಇದರಿಂದಾಗಿ, ವಿ.ಸೋಮಣ್ಣಗೆ ವರುಣಾದಲ್ಲಿ ಕೊಂಚ ಹಿನ್ನಡೆಯಾಗಿದೆ.

ತೋಟದಪ್ಪ ಬಸವರಾಜು ಅವರು ಈ ಬಾರಿಯೂ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಆದ್ರೆ ಪಕ್ಷ ಅವರಿಗೆ ಮಣೆ ಹಾಕದೇ, ವಿ.ಸೋಮಣ್ಣ ಅವರಿಗೆ ಟಿಕೆಟ್‌ ನೀಡಿದೆ. ಇದರಿಂದ ಬೇಸತ್ತಿರುವ ತೋಟದಪ್ಪ ಬಸವರಾಜು ಅವರು, ಬಿಜೆಪಿ ವಿರುದ್ಧ ಬಂಡಾಯವೆದ್ದಿದ್ದಾರೆ. ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

ವಿ.ಸೋಮಣ್ಣ ಅವರಿಗೆ ವರುಣಾ ಕ್ಷೇತ್ರ ಹೊಸದು. ಜೊತೆಗೆ ಬಿಜೆಪಿ ಮುಖಂಡರು ಕೂಡಾ ಅಷ್ಟು ಪ್ರಬಲವಾಗಿಲ್ಲ. ಇದ್ದ ಮುಖಂಡರೂ ಹೀಗೆ ಪಕ್ಷ ಬಿಟ್ಟುಹೋಗುತ್ತಿದ್ದಾರೆ. ಇದು ವಿ.ಸೋಮಣ್ಣ ಅವರಿಗೆ ಶುರುವಿನಲ್ಲೇ ನಿರಾಸೆ ತರಿಸಿದೆ. ಈ ನಡುವೆಯೂ ಸೋಮಣ್ಣ ಅವರು ವರುಣಾ ಕ್ಷೇತ್ರವನ್ನು ಗೆಲ್ಲೋದಕ್ಕೆ ಕಸರತ್ತು ಮಾಡುತ್ತಿದ್ದಾರೆ. ಸ್ವಾಮೀಜಿಗಳು, ಹಿರಿಯ ನಾಯಕರನ್ನು ಭೇಟಿಯಾಗಿ ಬೆಂಬಲ ಕೋರುತ್ತಿದ್ದಾರೆ.

Share Post