BengaluruPolitics

ವಿಶೇಷ ವಿಮಾನ ಕಳುಹಿಸಿ ಸವದಿಯವರನ್ನು ಕರೆಸಿಕೊಂಡ ಡಿಕೆಶಿ

ಬೆಂಗಳೂರು; ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಕಾಂಗ್ರೆಸ್‌ ಸೇರೋದು ಬಹುತೇಕ ಪಕ್ಕಾ ಆಗಿದೆ. ನಿನ್ನೆಯೇ ಪಕ್ಷಕ್ಕೆ ರಾಜೀನಾಮೆ ನೀಡೋದಾಗಿ ಘೋಷಿಸಿದ್ದ ಲಕ್ಷ್ಮಣ ಸವದಿಯವರು ಇಂದು ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಿದ್ದಾರೆ.

ಸವದಿ ಜೊತೆ ಕಾಂಗ್ರೆಸ್‌ ಶಾಸಕ ಲಕ್ಷ್ಮೀ ಹೆಬ್ಬಾಳ್ಕರ್‌ ಸಹೋದರ ಹಾಗೂ ಪರಿಷತ್‌ ಸದಸ್ಯ ಚೆನ್ನರಾಜ್‌ ಜೊತೆ ಬೆಂಗಳೂರಿಗೆ ಬಂದಿದ್ದಾರೆ. ಮಾಹಿತಿ ಪ್ರಕಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರೇ ವಿಶೇಷ ವಿಮಾನ ಕಳುಹಿಸಿ ಸವದಿಯವರನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಮೊದಲಿಗೆ ಬಿಜೆಪಿಗೆ ರಾಜೀನಾಮೆ ನೀಡಲಿರುವ ಸವದಿ, ನಂತರ ಅವರು ಡಿ.ಕೆ.ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲಿದ್ದಾರೆ. ಸಾಧ್ಯವಾದರೆ ಇಂದೇ ಅವರು ಕಾಂಗ್ರೆಸ್‌ ಸೇರ್ಪಡೆಯಾಗುವ ನಿರೀಕ್ಷೆ ಇದೆ.

ಬೆಳಗಾವಿ ರಾಜಕೀಯದಲ್ಲಿ ಡಿ.ಕೆ.ಶಿವಕುಮಾರ್‌ ಸಖತ್‌ ಗೇಮ್‌ ಪ್ಲ್ಯಾನ್‌ ಮಾಡುತ್ತಿದ್ದು, ರಮೇಶ್‌ ಜಾರಕಿಹೊಳಿಗತೆ ಠಕ್ಕರ್‌ ಕೊಡಲು ತಂತ್ರಗಾರಿಕೆ ಮಾಡುತಿದ್ದಾರೆ. ಈ ನಡುವೆ ಅಥಣಿ ಕ್ಷೇತ್ರದಲ್ಲಿ ಟಿಕೆಟ್‌ ಸಿಗದಿದ್ದಕ್ಕೆ ಸವದಿ ಅಸಮಾಧಾನಗೊಂಡಿದ್ದರು. ಸವದಿಗೆ ಟಿಕೆಟ್‌ ಕೈತಪ್ಪೋದಕ್ಕೆ ರಮೇಶ್‌ ಜಾರಕಿಹೊಳಿ ಕಾರಣರಾಗಿದ್ದರು. ಈ ಕಾರಣಕ್ಕೆ ಸವದಿಯವರನ್ನು ಕಾಂಗ್ರೆಸ್‌ ಸೆಳೆಯಲಾಗುತ್ತಿದೆ.

ಸವದಿಯವರನ್ನು ಕಾಂಗ್ರೆಸ್‌ಗೆ ಕರೆತರುವಂತೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಡಿ.ಕೆ.ಶಿವಕುಮಾರ್‌ ಟಾಸ್ಕ್‌ ಕೊಟ್ಟಿದ್ದರು. ಅದನ್ನು ಹೆಬ್ಬಾಳ್ಕರ್‌ ಸಮರ್ಥವಾಗಿ ನಿಭಾಯಿಸಿದ್ದಾರೆ. ಇನ್ನು ಇದೇ ವೇಳೆ ಪ್ರತಿಕ್ರಿಯೆ ನೀಡಿರುವ ಲಕ್ಷ್ಮೀ ಹೆಬ್ಬಾಳ್ಕರ್‌, ನನ್ನ ತಮ್ಮನಿಗೆ ಸವದಿಯವರನ್ನು ಕರೆತರುವ ಜವಾಬ್ದಾರಿಯನ್ನು ನೀಡಲಾಗಿತ್ತು. ಅದನ್ನು ಚೆನ್ನರಾಜು ನಿಭಾಯಿಸಿದ್ದಾರೆ. ಜಿಲ್ಲೆಯಲ್ಲಿ ಈಗಾಗಲೇ ಕಾಂಗ್ರೆಸ್‌ ಬಲಿಷ್ಠವಾಗಿದೆ. ಸವದಿಯವರು ಕೂಡಾ ಪಕ್ಷಕ್ಕೆ ಬಂದರೆ ನಮಗೆ ಇನ್ನಷ್ಟು ಚೈತನ್ಯ ಸಿಗಲಿದೆ ಎಂದು ಹೇಳಿದ್ದಾರೆ.

ಇನ್ನೊಂದೆಡೆ ಸತೀಸ್‌ ಜಾರಕಿಹೊಳಿ ಕೂಡಾ ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್‌ ಸಿದ್ಧಾಂತ ಒಪ್ಪಿ ಬಂದರೆ ಸವದಿ ಅವರನ್ನು ಸ್ವಾಗತಿಸುತ್ತೇನೆ ಎಂದು ಹೇಳಿದ್ದಾರೆ.

Share Post