BengaluruPolitics

ನಾಳೆ ರಾಜ್ಯಕ್ಕೆ ಭಾರತ್‌ ಜೋಡೋ ಯಾತ್ರೆ ಆಗಮನ; ಜನರಿಗೆ ಡಿಕೆಶಿ ಪತ್ರ

ಬೆಂಗಳೂರು; ರಾಹುಲ್ ಗಾಂಧಿ ನೇತೃತ್ವದಲ್ಲಿ ಆರಂಭವಾಗಿರುವ ಭಾರತ್ ಜೋಡೋ ಯಾತ್ರೆ ನಾಳೆ ಕರ್ನಾಟಕವನ್ನು ಪ್ರವೇಶಿಸಲಿದೆ. ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಜನತೆಗೆ ಪತ್ರ ಬರೆದಿದ್ದಾರೆ. ಯಾತ್ರೆಯನ್ನು ಬೆಂಬಲಿಸಬೇಕು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳಬೇಕು ಎಂದು ಜನರಲ್ಲಿ ಮನವಿ ಮಾಡಿದ್ದಾರೆ.

ಈ ಕುರಿತು ನಾಡಿನ ಜನತೆಗೆ ಪತ್ರ ಬರೆದಿರುವ ಅವರು, ಜನ-ಮನ ಒಂದಾಗದೆ ಜಗತ್ತಿನಲ್ಲಿ ಯಾವುದೇ ದೊಡ್ಡ ಬದಲಾವಣೆ ಸಂಭವಿಸಿಲ್ಲ. ಕೇವಲ 5 ವರ್ಷಕ್ಕೊಮ್ಮೆ ಮತ ಹಾಕಿದರೆ ಸಾಲದು. ನಮ್ಮ ಕಾಲದ ಸಮಸ್ಯೆಗಳಿಗೆ ಪ್ರತಿದಿನ ಸ್ಪಂದಿಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ಬದಲಾವಣೆ ಕಾಣಬೇಕಾದರೆ ಬದಲಾವಣೆಗೆ ಮುಂದಾಗಬೇಕು ಎಂದು ಅವರು ಹೇಳಿದ್ದಾರೆ. ಭಾರತ ಐಕ್ಯತಾ ಯಾತ್ರೆಯು ಬದಲಾವಣೆಯ ಮೊದಲ ಹೆಜ್ಜೆಯಾಗಿದೆ. ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವು ಬಿಜೆಪಿಯ ನಿರಂಕುಶ ಅಧಿಕಾರದ ವಿರುದ್ಧ, ದ್ವೇಷ ರಾಜಕಾರಣದ ವಿರುದ್ಧ ಧ್ವನಿ ಎತ್ತುತ್ತಿದೆ. ಬೆಲೆ ಏರಿಕೆ, ನಿರುದ್ಯೋಗ, ಕೋಮು ಸೌಹಾರ್ದ, ಮಹಿಳಾ ಸುರಕ್ಷೆ ಅಥವಾ ಆರ್ಥಿಕ ಅಭಿವೃದ್ಧಿಯಂಥ ಪ್ರಮುಖ ವಿಷಯಗಳ ಬಗ್ಗೆ ಸರ್ಕಾರವು ಮಾತೇ ಆಡುತ್ತಿಲ್ಲ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಯಾತ್ರೆಯಲ್ಲಿ ಪಾಲ್ಗೊಂಡು ನಮ್ಮೊಂದಿಗೆ ಹೆಜ್ಜೆ ಹಾಕಿದಾಗ ಬದಲಾವಣೆಯ ಶಕ್ತಿಯೇನು ಎಂಬುದು ಅರಿವಾಗಲಿದೆ. ನಾವು 40 ಪರ್ಸೆಂಟ್ ಭ್ರಷ್ಟಾಚಾರದೊಂದಿಗೆ ಬದುಕಬೇಕಿಲ್ಲ ಎಂದು ನೀವೂ ನಂಬಲು ಆರಂಭಿಸುತ್ತೀರಿ. ಇತರ ಪಕ್ಷಗಳಲ್ಲಿರುವ ನನ್ನ ಸ್ನೇಹಿತರನ್ನೂ ನಾನು ಯಾತ್ರೆಯಲ್ಲಿ ಹೆಜ್ಜೆ ಹಾಕಲು ಆಹ್ವಾನಿಸುತ್ತೇವೆ. ಇದು ಪಿಕ್​ನಿಕ್ ಅಲ್ಲ. ಹವಾಮಾನ ಹೇಗಿದ್ದರೂ ನಾವು ದಿನಕ್ಕೆ 20 ಕಿಮೀ ನಡೆಯಲಿದ್ದೇವೆ. ಉಚಿತ ಸಿಲಿಂಡರ್ ಪಡೆದು ರಿಫಿಲ್​ಗಾಗಿ ದುಬಾರಿ ಹಣ ತೆರಲು ಸಾಧ್ಯವಾಗದ ಅಸಹಾಯಕ ಮಹಿಳೆಯರನ್ನು ಭೇಟಿಯಾಗಲಿದ್ದೇವೆ ಎಂದು ಅವರು ಹೇಳಿದ್ದಾರೆ.

Share Post