ಹೊಸ ರಾಷ್ಟ್ರೀಯ ಪಕ್ಷ ಸ್ಥಾಪಿಸ್ತಾರಂತೆ ತೆಲಂಗಾಣ ಸಿಎಂ
ನವದೆಹಲಿ; ಟಿಆರ್‌ಎಸ್ ಮುಖ್ಯಸ್ಥ ಹಾಗೂ ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್ ಅವರು ಹೊಸ ರಾಷ್ಟ್ರೀಯ ಪಕ್ಷ ಹುಟ್ಟುಹಾಕುತ್ತಿದ್ದಾರೆ. ವಿಜಯದಶಮಿ ದಿನ ಹೊಸ ಪಕ್ಷಕ್ಕೆ ಚಾಲನೆ ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಭಾರತ್ ರಾಷ್ಟ್ರ ಸಮಿತಿ ಅಥವಾ ಮೇರಾ ಭಾರತ್ ಮಹಾನ್ ಎಂದು ಹೊಸ ಪಕ್ಷಕ್ಕೆ ಹೆಸರಿಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಈ ಸಂಬಂಧ ಚಂದ್ರಶೇಖರ್ ರಾವ್ ಅವರು ಅಕ್ಟೋಬರ್ 5ರಂದು ಟಿಆರ್‌ಎಸ್ ಕಾರ್ಯಕಾರಿಣಿ ಸಭೆ ಕರೆದಿದ್ದಾರೆ. ಸಚಿವರು, ಸಂಸದರು, ಶಾಸಕರು ಮತ್ತು ಪಕ್ಷದ ಮುಖಂಡರು ಸಭೆಯಲ್ಲಿ ಹಾಜರಿರಲಿದ್ದು, ರಾಷ್ಟ್ರೀಯ ಪಕ್ಷದ ಘೋಷಣೆಯ ಬಗ್ಗೆ ರೂಪುರೇಷೆಗಳನ್ನು ತಯಾರಿಸಲಾಗುತ್ತದೆ. ಈಗಿರುವ ಟಿಆರ್‌ಎಸ್ ರಾಷ್ಟ್ರೀಯ ಪಕ್ಷವಾಗಿ ಪರಿವರ್ತನೆಯಾಗಲಿದೆ ಎಂದು ಹೇಳಲಾಗಿದೆ.
ರಾಷ್ಟ್ರೀಯ ಪಕ್ಷಕ್ಕೆ ಒಪ್ಪಿಗೆ ದೊರೆತ ನಂತರ ಕೆಸಿಆರ್ ತೆಲಂಗಾಣದಲ್ಲಿ ಅಥವಾ ದೆಹಲಿಯಲ್ಲಿ ಬೃಹತ್ ಸಾರ್ವಜನಿಕ ಸಭೆ ನಡೆಸಿ ಅಜೆಂಡಾ ಬಹಿರಂಗಪಡಿಸುತ್ತಾರೆಂದು ತಿಳಿದುಬಂದಿದೆ. ಇನ್ನೆರಡು ದಿನಗಳಲ್ಲಿ ರಾಷ್ಟ್ರೀಯ ಪಕ್ಷದ ಸಿದ್ಧತೆ ಬಗ್ಗೆ ಸಂಪೂರ್ಣ ಸ್ಪಷ್ಟನೆ ಸಿಗಲಿದೆಯಂತೆ.