Bengaluru

ಭಾರಿ ಮಳೆಯಿಂದ ಅವಾಂತರ; ನಗರ ಪ್ರದಕ್ಷಿಣೆ ಮಾಡಿದ ಸಿಎಂ ಬೊಮ್ಮಾಯಿ

ಬೆಂಗಳೂರು: ಕಳೆದ ಎರಡು ಮೂರು ದಿನಗಳಿಂದ ಬೆಂಗಳೂರಿನಲ್ಲಿ ಭಾರಿ ಮಳೆಯಾಗುತ್ತಿದ್ದು, ನಗರದ ಹೆಲವೆಡೆ ಹಾನಿ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಇಂದು ನಗರ ಪ್ರದಕ್ಷಿಣೆ ನಡೆಸಿ, ಮಳೆ ಹಾನಿ ಪ್ರದೇಶಗಳನ್ನು ವೀಕ್ಷಣೆ ಮಾಡಿದರು.

ಇದೇ ವೇಳೆ ಮಾತನಾಡಿರುವ ಸಿಎಂ ಬೊಮ್ಮಾಯಿ, ಮೇ ತಿಂಗಳ ಪೂರ್ತಿ ಎಷ್ಟು ಮಳೆಯಾಗಬೇಕಿತ್ತೋ ಅಷ್ಟು ಮಳೆ ಎರಡು ಮೂರು ಗಂಟೆಯಲ್ಲಿ ಆಗಿದೆ. ಈ ಕಾರಣದಿಂದಾಗಿ ಬೆಂಗಳೂರಿನಲ್ಲಿ ಹೆಚ್ಚ ಹಾನಿಯಾಗಿದೆ. ಹೀಗಾಗಿ ತುರ್ತು ಕ್ರಮಗಳು ಏನು ತೆಗೆದುಕೊಳ್ಳಬೇಕೋ ಅದನ್ನು ಮಾಡಲು ಈಗಾಗಲೇ ಆದೇಶ ಮಾಡಿದ್ದೇನೆ ಎಂದು ಹೇಳಿದರು. ಬೆಂಗಳೂರು ಸಾಕಷ್ಟು ಬೆಳವಣಿಗೆಯಾಗುತ್ತಿದೆ. ಹೀಗಾಗಿ, ಮಳೆ ನೀರಿನಿಂದಾಗು ಅನಾಹುತ ತಡೆಯಲು ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ. ಇದಕ್ಕಾಗಿ ವ್ಯಾಲಿಗಳ ಅಭಿವೃದ್ಧಿ ಮಾಡಬೇಕಿದೆ. ಇದಕ್ಕಾಗಿ 1600 ಕೋಟಿ ರೂಪಾಯಿಗೆ ಬಜೆಟ್‌ನಲ್ಲಿ ಅನುಮೋದನೆ ನೀಡಲಾಗಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾ ಬಳಿಯಿಂದ ಬಿಎಂಟಿಸಿ ವಿಶೇಷ ಬಸ್ ನಲ್ಲಿ ಹೊರಟು ಮುಖ್ಯಮಂತ್ರಿ, ಮೊದಲಿಗೆ ಕುರುಬರಹಳ್ಳಿ ಬಳಿಯ ಜೆ.ಸಿ.ನಗರಕ್ಕೆ ಭೇಟಿ ನೀಡಿದರು. ಮನೆಗಳಿಗೆ ನೀರು ನುಗ್ಗಿ ತೊಂದರೆಗೆ ಸಿಲುಕಿದ್ದ ಕುಟುಂಬಗಳ ಕಷ್ಟ ಆಲಿಸಿದರು. ರಾಜಕಾಲುವೆ ನೀರು ನುಗ್ಗಿ ಮನೆಯಲ್ಲಿನ ದವಸ ಧಾನ್ಯಗಳು ನೀರು ಪಾಲಾಗಿರುವುದನ್ನು ನಿವಾಸಿಗಳು ಮುಖ್ಯಮಂತ್ರಿ ಅವರ ಗಮನಕ್ಕೆ ತಂದರು. ಸಂತ್ರಸ್ತರಲ್ಲಿ ಕೆಲವರಿಗೆ ಸ್ಥಳದಲ್ಲೇ 25 ಸಾವಿರ ರೂಪಾಯಿ ಮೊತ್ತದ ಚೆಕ್ ವಿತರಿಸಿದರು. ಕಮಲಾನಗರ, ಹೆಬ್ಬಾಳ, ಲಗ್ಗೇರೆ, ನಾಗವಾರ, ಎಚ್.ಬಿ.ಆರ್ ಲೇಔಟ್ ನಲ್ಲಿ ಮುಖ್ಯಮಂತ್ರಿ ವೀಕ್ಷಣೆ ನಡೆಸುವರು. ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ಸಚಿವರಾದ ಆರ್.ಅಶೋಕ್, ವಿ.ಸೋಮಣ್ಣ, ಕೆ.ಗೋಪಾಲಯ್ಯ ಜತೆಯಲ್ಲಿದ್ದಾರೆ.

Share Post