BengaluruPolitics

ಡಿಸೆಂಬರ್‌ 17ಕ್ಕೆ ಕಾಂಗ್ರೆಸ್‌ ಸೇರ್ತಾರಾ ವೈಎಸ್‌ವಿ ದತ್ತಾ..?

ಬೆಂಗಳೂರು; ಜೆಡಿಎಸ್‌ ಹಿರಿಯ ನಾಯಕ, ಕಡೂರು ಕ್ಷೇತ್ರದ ಮಾಜಿ ಶಾಸಕ ವೈಎಸ್‌ವಿ ದತ್ತ ಅವರು ಜೆಡಿಎಸ್‌ಗೆ ಗುಡ್‌ ಬೈ ಹೇಳುವ ಸಮಯ ಹತ್ತಿರ ಬಂದಿದೆ. ಡಿಸೆಂಬರ್‌ 17 ರಂದು ವೈಎಸ್‌ವಿ ದತ್ತ ಅವರು ಕಾಂಗ್ರೆಸ್‌ಗೆ ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಬಗ್ಗೆ ಅವರ ಆಪ್ತರ ಆಡಿಯೋ ವೈರಲ್‌ ಆಗಿದ್ದು, ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಸಿದೆ. ಈ ಹಿಂದೆಯೂ ಕೂಡ ಕಾಂಗ್ರೆಸ್‌ ಸೇರುವ ಬಗ್ಗೆ ದತ್ತ ಅವರದ್ದು ಎನ್ನಲಾಗಿದ್ದ ಆಡಿಯೋ ವೈರಲ್‌ ಆಗಿತ್ತು.

ದತ್ತ ಅವರ ರಾಜೀನಾಮೆಯಿಂದ ಜೆಡಿಎಸ್‌ಗೆ ಭಾರೀ ಹಿನ್ನಡೆಯಾಗಲಿದ್ದು, ವೈಎಸ್‌ವಿ ದತ್ತ ಕಾಂಗ್ರೆಸ್‌ ಸೇರಿದರೆ ಕಡೂರು ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ನೇರ ಹಣಾಹಣಿ ನಡೆಯಲಿದೆ. ಡಿಸೆಂಬರ್‌ 15ರಂದು ವೈಎಸ್‌ವಿ ದತ್ತ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಲಿದ್ದು, ಅಂದೇ ಕಾಂಗ್ರೆಸ್‌ ಸೇರ್ಪಡೆ ವಿಚಾರವನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ. ಕಡೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸಮ್ಮಿಲನ ಆಗಲಿದೆ ಎಂದು ಹೇಳಿದ್ದಾರೆ ಎಂದು ವೈರಲ್‌ ಆದ ಆಡಿಯೋದಲ್ಲಿ ಇದೆ.

ಅದಾದ ಬಳಿಕ ಡಿಸೆಂಬರ್‌ 17ರಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ನಡೆಯಲಿರುವ ಕಾಂಗ್ರೆಸ್‌ ಸಮಾವೇಶದಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ವೈಎಸ್‌ವಿ ದತ್ತ ಕಾಂಗ್ರೆಸ್‌ ಸೇರುತ್ತಾರೆ ಎನ್ನಲಾಗಿದೆ. ಈ ಬಗ್ಗೆ ವೈಎಸ್‌ವಿ ದತ್ತ ಅವರ ಆಪ್ತ, ಮಾಜಿ ಎಪಿಎಂಸಿ ಅಧ್ಯಕ್ಷ ರಾಜಣ್ಣ ಯಟಗೇರಿ ಅವರದ್ದು ಎನ್ನಲಾದ ಆಡಿಯೋ ವೈರಲ್‌ ಆಗಿದ್ದು, ದತ್ತ ಅವರ ಕಾಂಗ್ರೆಸ್‌ ಸೇರ್ಪಡೆ ವಿಚಾರ ಅಂತಿಮ ಆಗಿದೆ ಎಂದು ಹೇಳಲಾಗಿದೆ.

ವೈಎಸ್‌ವಿ ದತ್ತ ಅವರ ಆಪ್ತ, ಮಾಜಿ ಎಪಿಎಂಸಿ ಅಧ್ಯಕ್ಷ ರಾಜಣ್ಣ ಯಟಗೇರಿ ಅವರ ಆಡಿಯೋದಲ್ಲಿ, ವೈಎಸ್‌ವಿ ದತ್ತ ಅವರು ಈಗ ತಾನೇ ದೂರವಾಣಿ ಮೂಲಕ ಶುಭ ಸಂದೇಶ ಕಳಿಸಿದ್ದಾರೆ. ಈಗಾಗಲೇ ನಿಮ್ಮೆಲ್ಲರ, ಜೆಡಿಎಸ್‌ನ ಮುಖಂಡರು, ಮತದಾರರು ಹಾಗೂ ಕಾಂಗ್ರೆಸ್‌ ಮುಖಂಡರ ವಿಶ್ವಾಸದ ಜೊತೆಯಲ್ಲಿ ಸಿದ್ದರಾಮಯ್ಯ ಅವರನ್ನು ಡಿಸೆಂಬರ್‌ 15ರಂದು ಭೇಟಿಯಾಗುತ್ತೇನೆ. ಅಂದೇ ಕಾಂಗ್ರೆಸ್‌ ಸೇರುವುದನ್ನು ಖಚಿತಪಡಿಸುತ್ತೇನೆ ಎಂದಿರುವ ವೈಎಸ್‌ವಿ ದತ್ತಾ, ಡಿಸೆಂಬರ್‌ 17ರಂದು ಬೆಳ್ತಂಗಡಿಯಲ್ಲಿ ನಡೆಯಲಿರುವ ಕಾಂಗ್ರೆಸ್‌ ಸಮಾವೇಶದಲ್ಲಿ ಸಿದ್ದರಾಮಯ್ಯ ಅವರ ಜೊತೆ ವೇದಿಕೆ ಹಂಚಿಕೊಳ್ಳುತ್ತೇನೆ ಎಂದು ದತ್ತಾ ಹೇಳಿದ್ದಾರೆ ಎಂದು ಆಡಿಯೋದಲ್ಲಿ ಹೇಳಲಾಗಿದೆ.

ಇನ್ನು, ವೈಎಸ್‌ವಿ ದತ್ತಾ ಅವರು ಕಾಂಗ್ರೆಸ್‌ ಸೇರ್ಪಡೆಯಾದರೆ ಕಡೂರು ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗುವುದು ಬಹುತೇಕ ಫಿಕ್ಸ್‌ ಆಗಿದೆ. ಸದ್ಯ ಬಿಜೆಪಿಯ ಬೆಳ್ಳಿ ಪ್ರಕಾಶ್‌ ಅವರು ಕಡೂರಲ್ಲಿ ಶಾಸಕರಾಗಿದ್ದು, ಕಳೆದ ಬಾರಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ವೈಎಸ್‌ವಿ ದತ್ತಾ ಸೋಲು ಅನುಭವಿಸಿದ್ದರು. ಈ ಬಾರಿ ದತ್ತಾ ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸಿದರೆ ಕಡೂರು ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ನೇರಾನೇರ ಪೈಪೋಟಿ ನಡೆಯಲಿದೆ.

Share Post