BengaluruPolitics

ಚಿಕ್ಕಬಳ್ಳಾಪುರಕ್ಕೆ ಬಸವರಾಜ ಬೊಮ್ಮಾಯಿ, ಬಾಗೇಪಲ್ಲಿಗೆ ಸುಧಾಕರ್‌..?; ಬೆಂಕಿ ಇಲ್ಲದೆ ಹೊಗೆಯಾಡುತ್ತಾ..?

ಚಿಕ್ಕಬಳ್ಳಾಪುರ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಿಗ್ಗಾಂವಿ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. ಆದ್ರೆ ಈ ಬಾರಿ ಅವರಿಗೆ ಸೋಲಿನ ಭೀತಿ ಇದೆ. ಹೀಗಾಗಿ ಬೇರೆ ಕ್ಷೇತ್ರ ಹುಡುಕುತ್ತಿದ್ದಾರೆ ಎಂಬ ಮಾತಿತ್ತು. ಆದ್ರೆ, ಅವರು ದಕ್ಷಿಣ ಕರ್ನಾಟಕಕ್ಕೆ ಬರುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಆದ್ರೆ ಅವರು ಚಿಕ್ಕಬಳ್ಳಾಪುರದಲ್ಲಿ ಸ್ಪರ್ಧೆ ಮಾಡುತ್ತಾರೆಂಬ ಗುಲ್ಲೆದ್ದಿದೆ. ಇಂದು ಬೆಳಗ್ಗೆಯಿಂದ ಚಿಕ್ಕಬಳ್ಳಾಪುರದಲ್ಲಿ ಈ ಬಗ್ಗೆ ದೊಡ್ಡ ಮಟ್ಟದ ಚರ್ಚೆಯಾಗುತ್ತಿದೆ.

ಚಿಕ್ಕಬಳ್ಳಾರದಲ್ಲಿ ಡಾ.ಕೆ.ಸುಧಾಕರ್‌ ಅವರು ಶಾಸಕರಿದ್ದಾರೆ. ಸುಧಾಕರ್‌ ಅವರು ಸಿಎಂ ಬೊಮ್ಮಾಯಿಗೆ ಅತ್ಯಾಪ್ತರು. ಹೀಗಾಗಿ ಬೇರೆ ಕ್ಷೇತ್ರ ಹುಡುಕುತ್ತಿರುವ ಬೊಮ್ಮಾಯಿಯವರಿಗೇ ಸುಧಾಕರ್‌ ಅವರೇ ಆಹ್ವಾನ ನೀಡಿದ್ದಾರೆ ಎನ್ನಲಾಗುತ್ತಿದೆ. ನೀವು ಚಿಕ್ಕಬಳ್ಳಾಪುರದಲ್ಲಿ ಸ್ಪರ್ಧೆ ಮಾಡಿದರೆ ಗೆಲ್ಲಿಸಿಕೊಂಡು ಬರೋ ಜವಾಬ್ದಾರಿ ನನ್ನದು ಎಂದು ಸುಧಾಕರ್‌ ಹೇಳಿದ್ದಾರೆ ಎಂಬ ಮಾತುಗಳು ಚಿಕ್ಕಬಳ್ಳಾಪುರದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಇನ್ನು ಕ್ಷೇತ್ರ ಬಿಟ್ಟುಕೊಡುವ ಸುಧಾಕರ್‌ ಅವರು ಬಾಗೇಪಲ್ಲಿಯಿಂದ ಸ್ಪರ್ಧೆ ಮಾಡೋಕೆ ಮನಸು ಮಾಡಿದ್ದಾರೆ ಎನ್ನಲಾಗುತ್ತಿದೆ.

ಆದ್ರೆ ಇದಕ್ಕೆ ಯಾವುದೇ ಪುರಾವೆ ಇಲ್ಲವಾದರೂ ಈ ಬಗ್ಗೆ ಚರ್ಚೆಗಳು ನಡೆಯುತ್ತಿರುವುದಂತೂ ಸತ್ಯ. ಜೊತೆಗೆ ಕಾಂಗ್ರೆಸ್‌ ಹಿರಿಯ ನಾಯಕರೊಬ್ಬರು ಈ ವಿಚಾರವನ್ನು ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ. ಅಂದಹಾಗೆ, ಬೊಮ್ಮಾಯಿಯವರು ಲಿಂಗಾಯತ ಸಮುದಾಯದವರು. ಆದ್ರೆ ಚಿಕ್ಕಬಳ್ಳಾಪುರದಲ್ಲಿ ಅವರ ಸಮಯದಾಯದ ಮತಗಳೇ ಇಲ್ಲ. ಹೀಗಿರುವಾಗ ಅದೇಗೆ ಅವರು ಅಲ್ಲಿ ಸ್ಪರ್ಧೆ ಮಾಡೋದಕ್ಕೆ ಮನಸು ಮಾಡುತ್ತಾರೆ ಎಂಬ ಪ್ರಶ್ನೆಯೂ ಎದ್ದಿದೆ. ಆದ್ರೆ ಸುಧಾಕರ್‌ ಅವರು ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿಸಿದ್ದಾರೆ. ಅಭಿವೃದ್ಧಿಯನ್ನೇ ಮುಂದಿಟ್ಟುಕೊಂಡು ಬೊಮ್ಮಾಯಿಗೆ ಮತ ಕೇಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ಶಿಗ್ಗಾಂವಿ ಕ್ಷೇತ್ರದಲ್ಲಿ ಮಾಜಿ ಸಂಸದ ಮಂಜುನಾಥ್‌ ಕುನ್ನೂರು ಹಾಗೂ ಅವರ ಪುತ್ರ ರಾಜು ಕುನ್ನೂರ್‌ ಕಾಂಗ್ರೆಸ್‌ ಸೇರಿದ್ದಾರೆ. ಇವರಿಬ್ಬರೂ ಬೊಮ್ಮಾಯಿಗೆ ಆತ್ಮೀಯರಾಗಿದ್ದರು. ಮಂಜುನಾಥ್‌ ಕುನ್ನೂರು ಅವರು ನಾಲ್ಕು ಬಾರಿ ಶಿಗ್ಗಾಂವಿ ಕ್ಷೇತ್ರದಲ್ಲಿ ಶಾಸಕರಾಗಿದ್ದವರು. ಅವರು ಈಗ ಕಾಂಗ್ರೆಸ್‌ ಸೇರಿರುವುದರಿಂದ ಬೊಮ್ಮಾಯಿಗೆ ಈ ಬಾರಿ ಗೆಲ್ಲೋದು ಕಷ್ಟ ಎನ್ನಲಾಗುತ್ತಿದೆ. ಹೀಗಾಗಿ ಅವರು ಬೇರೆ ಕ್ಷೇತ್ರ ಹುಡುಕುತ್ತಿರೋದು ಸತ್ಯ. ಆದ್ರೆ ಚಿಕ್ಕಬಳ್ಳಾಪುರಕ್ಕೆ ಬರುತ್ತಾರೆ ಎಂಬುದು ಅಚ್ಚರಿ ಹಾಗೂ ನಂಬೋಕೆ ಕಷ್ಟವಾದಂತಗ ಸುದ್ದಿ.

ಇನ್ನೊಂದೆಡೆ ಬಾಗೇಪಲ್ಲಿ ಕ್ಷೇತ್ರದಲ್ಲಿ ಸದ್ಯಕ್ಕೆ ಬಿಜೆಪಿಯಲ್ಲಿ ಮುನಿರಾಜು, ರಾಮಪ್ಪ ಸೇರಿ ಮೂವರು ಟಿಕೆಟ್‌ ಕೇಳುತ್ತಿದ್ದಾರೆ. ಇಲ್ಲಿ ಬಿಜೆಪಿ ಅಷ್ಟು ಪ್ರಾಬಲ್ಯ ಇಲ್ಲ. ಹೀಗಿರುವಾಗಿ ಸುಧಾಕರ್‌ ಅಲ್ಲಿಗೆ ಯಾಕೆ ಹೋಗುತ್ತಾರೆ ಎಂದು ಕೇಳುವ ಜನರೂ ಇದ್ದಾರೆ. ಹೀಗಿದ್ದರೂ ಈ ಬಗ್ಗೆ ಇಂದು ಬೆಳಗ್ಗೆಯಿಂದ ಚರ್ಚೆಗಳು ನಡೆಯುತ್ತಿವೆ. ಒಟ್ಟಿನಲ್ಲಿ ಚರ್ಚೆ ನಡೆಯುತ್ತಿದೆ. ಇದು ಎಷ್ಟು ನಿಜವೋ ಗೊತ್ತಿಲ್ಲ. ಆದ್ರೆ ಬೆಂಕಿ ಇಲ್ಲದೆ ಹೊಗೆ ಆಡಲ್ಲ ಅನ್ನೋದಂತೂ ಸತ್ಯ.

Share Post