ಅರವಿಂದ ಲಿಂಬಾವಳಿ ಶಾಸಕರಾಗಲು ಅರ್ಹತೆ ಇಲ್ಲ; ಡಿ.ಕೆ.ಶಿವಕುಮಾರ್
ಬೆಂಗಳೂರು; ಒತ್ತುವರಿ ವಿಚಾರ ಸಂಬಂಧ ಮಾತನಾಡಲು ಬಂದ ಮಹಿಳೆಯನ್ನು ಅವಾಚ್ಯ ಶಬ್ದಗಳಲ್ಲಿ ನಿಂದಿಸಿದ ಶಾಸಕ ಅರವಿಂದ ಲಿಂಬಾವಳಿ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಶಾಸಕರ ಬಳಿ ಹೇಳಿಕೊಳ್ಳದೆ ಯಾರ ಬಳಿ ಹೇಳಿಕೊಳ್ಳುತ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ. ಜನರು ನೋವು, ದುಖ ದುಮ್ಮಾನ ಹೇಳಿಕೊಳ್ಳುತ್ತಾರೆ. ಜನಪ್ರತಿನಿಧಿಗಳಾದ ನಾವು ಅದನ್ನು ತಾಳ್ಮೆಯಿಂದ ಕೇಳಬೇಕು. ತಾಳ್ಮೆ ಇಲ್ಲ ಅಂದ್ರೆ ಲಿಂಬಾವಳಿ ಶಾಸಕರಾಗಿ ಇರೋಕೆ ನಾಲಾಯಕ್ ಎಂದು ಹೇಳಿದರು.
ಮನವಿ ಸಲ್ಲಿಸಲು ಬಂದ ಮಹಿಳೆಗೆ ಶಾಸಕ ಅರವಿಂದ ಲಿಂಬಾವಳಿ ಗದರಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಮಳೆ ಅನಾಹುತ ಪ್ರದೇಶವಾದ ವರ್ತೂರು ಕೆರೆ ಕೋಡಿ ವೀಕ್ಷಿಸಲು ಅಧಿಕಾರಿಗಳ ಜೊತೆ ಅರವಿಂದ ಲಿಂಬಾವಳಿ ಬಂದಿದ್ದರು. ಈ ವೇಳೆ ಸಮಸ್ಯೆ ಹೇಳಲು ಬಂದ ಮಹಿಳೆಗೆ, ನಿನಗೆ ಮಾನ ಮರ್ಯಾದೆ ಇದ್ಯಾ? ನಿನಗೆ ನಾಚಿಕೆ ಆಗಲ್ವಾ ಎಂದು ಏರು ದನಿಯಲ್ಲಿ ಅವಾಜ್ ಹಾಕಿದ್ದರು.