Bengaluru

ಯುವತಿಯರನ್ನು ದುಬೈ ಕಳುಹಿಸುವ ದಂಧೆ; ಆರೋಪಿಗಳು ಅರೆಸ್ಟ್‌

ಬೆಂಗಳೂರು: ಸಿನಿಮಾಗಳಲ್ಲಿ ಜ್ಯೂನಿಯರ್ ಆರ್ಟಿಸ್ಟ್‌ಗಳಾಗಿ ನಟಿಸಲು ಅವಕಾಶಕ್ಕಾಗಿ ಕಾಯುತ್ತಿರುವ ಯುವತಿಯರಿಗೆ ಹಣದ ಆಮಿಷವೊಡ್ಡಿ ವೇಶ್ಯಾವಾಟಿಕೆ, ಅನೈತಿಕ ಚಟುವಟಿಕೆಗಳಲ್ಲಿ ತೊಡಗಿಸುತ್ತಿದ್ದ ಜಾಲವನ್ನು ಸಿಸಿಬಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಹಲವು ವರ್ಷಗಳಿಂದ ಈ ದಂಧೆಯಲ್ಲಿ ತೊಡಗಿಸಿಕೊಂಡಿದ್ದ ಕೊಪ್ಪಳ ಮೂಲದ ಪ್ರಮುಖ ಆರೋಪಿ ಬಸವರಾಜ ಶಂಕರಪ್ಪ, ಸಹಚರರಾದ ಆದರ್ಶ, ರಾಜೇಂದ್ರ ನಾಚಿಮುತ್ತು, ಮಾರಿಯಪ್ಪನ್, ಚಂದ್ರು, ಅಶೋಕ್ ಹಾಗೂ ರಾಜೀವ್ ಗಾಂಧಿ ಎಂಬುವವರನ್ನು ಬಂಧಿಸಲಾಗಿದೆ.  17 ಯುವತಿಯರ ಪಾಸ್‌ಪೋರ್ಟ್‌ಗಳನ್ನು ವಶಪಡಿಸಿಕೊಂಡಿದ್ದು, ಅವರನ್ನು ರಕ್ಷಿಸಲಾಗಿದೆ.

 ಪ್ರಮುಖ ಆರೋಪಿ ಸೇರಿ ಇಬ್ಬರು ಕರ್ನಾಟಕದವರು. ಉಳಿದವರು ತಮಿಳುನಾಡು ಮೂಲದವರೆಂದು ಗೊತ್ತಾಗಿದೆ. ಇವರೆಲ್ಲಾ ಸೇರಿ ಇವೆಂಟ್‌ ಮ್ಯಾನೇಜ್‌ಮೆಂಟ್‌ ಒಂದನ್ನು ನಡೆಸುತ್ತಿದ್ದರು. ಇದರ ಮೂಲಕ ಕರ್ನಾಟಕ, ನೆರೆಯ ರಾಜ್ಯಗಳ ಯುವತಿಯರಿಗೆ ಗಾಳ ಹಾಕುತ್ತಿದ್ದರು. ನಂತರ ದುಬೈಗೆ ಹೋದರೆ ಲಕ್ಷ ಲಕ್ಷ ಹಣ ಸಂಪಾದಿಸಬಹುದು ಎಂದು ಪುಸಲಾಯಿಸುತ್ತಿದ್ದರಂತೆ. ಅಲ್ಲಿಯೂ ಕೂಡ ಡ್ಯಾನ್ಸ್, ಆಕ್ಟಿಂಗ್ ಕೆಲಸ ಇರುತ್ತೆ ಅಂತ ಹೇಳಿ ಯುವತಿಯರಿಗೆ 50 ಸಾವಿರ ಅಡ್ವಾನ್ಸ್ ಕೊಟ್ಟು ವೀಸಾ, ಪಾಸ್‌ಪೋರ್ಟ್ ಮಾಡಿಸಿ ದುಬೈ ವಿಮಾನ ಹತ್ತಿಸುತ್ತಿದ್ದರು.

   ಹೀಗೆ ದುಬೈಗೆ ಹೋದ ಯುವತಿಯರಿಗೆ ಡ್ಯಾನ್ಸ್ ಬಾರ್‌ನಲ್ಲಿ ಡ್ಯಾನ್ಸ್, ಬಲವಂತವಾಗಿ ಅನೈತಿಕ ಚಟುವಟಿಕೆಗೂ ಬಳಸಿಕೊಳ್ಳುತ್ತಿದ್ದರು. ದುಬೈನ ಡ್ಯಾನ್ಸ್ ಬಾರ್ ಮಾಲೀಕರ ಸಂಪರ್ಕ ಹೊಂದಿದ್ದ ಆರೋಪಿಗಳು ಅವರಿಂದಲೂ ಸಹ ಕಮಿಷನ್ ರೂಪದಲ್ಲಿ ಹಣ ಪಡೆದುಕೊಳ್ಳುತ್ತಿದ್ದರು ಎನ್ನಲಾಗಿದೆ.‌

Share Post