ಹುತಾತ್ಮ ಯೋಧರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ; ಸಿಎಂ ಬೊಮ್ಮಾಯಿ
ಬೆಂಗಳೂರು; ದೇಶದ ಗಡಿಯಲ್ಲಿ ಚಳಿಮಳೆಯೆನ್ನದೆ ದೇಶಕ್ಕಾಗಿ ಹೋರಾಡಿ ಮಡಿದ ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರಿ ಉದ್ಯೋಗ ನೀಡುತ್ತೇವೆ. ಅಲ್ಲದೆ, ಹುತಾತ್ಮ ಯೋಧರ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡುತ್ತೇವೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಘೋಷಿಸಿದ್ದಾರೆ.ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಬೆಂಗಳೂರಿನ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ಬಳಿಕ ರಾಜ್ಯವನ್ನು ಉದ್ದೇಶಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಷಣ ಮಾಡಿದ್ದಾರೆ.
ಕರ್ನಾಟಕ ದೇಶದಲ್ಲಿಯೇ ವಿಶಿಷ್ಟವಾದ ರಾಜ್ಯವಾಗಿದೆ. ಎಲ್ಲ ತರಹದ ಸಂಪನ್ಮೂಲಗಳು ಹೇರಳವಾಗಿವೆ. ಹಲವಾರು ಕ್ಷೇತ್ರಗಳಲ್ಲಿ ಕರ್ನಾಟಕ ರಾಜ್ಯ ನಂಬರ್ 1 ಆಗಿದೆ. ದೇಶದ ಜಿ.ಡಿ.ಪಿ ಯಲ್ಲಿ ಶೇ.9ರಷ್ಟು ಕೊಡುಗೆ ನಮ್ಮದಾಗಿದೆ. ತಂತ್ರಜ್ಞಾನದಲ್ಲಿ ಕರ್ನಾಟಕ ಮುಂದಿದೆ. ರಾಜ್ಯದಿಂದ ಅತಿಹೆಚ್ಚು ಆದಾಯ ಸೃಷ್ಟಿಯಾಗುತ್ತಿದೆ. ನಾವು ಸ್ತ್ರೀಶಕ್ತಿ ಸಂಘ ಮತ್ತು ಶಾಲೆಗಳನ್ನು ಅಭಿವೃದ್ಧಿ ಮಾಡಿದ್ದೇವೆ. ಗ್ರಾಮ ಪಂಚಾಯಿತಿಗೆ ಸಾಕಷ್ಟು ಹಣ ಬಿಡುಗಡೆ ಮಾಡಿದ್ದೇವೆ. ದೀನ ದಲಿತರಿಗೆ ವಿಶೇಷ ಆರ್ಥಿಕ ನೆರವು ನೀಡಿದ್ದೇವೆ. ದಲಿತರು, ಬಡವರು ವಂಚಿತರು ತಮ್ಮ ತಮ್ಮ ಜೀವನ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಲು ಆರ್ಥಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳಬೇಕು ಎಂದರು.
ಈ ದೇಶವನ್ನು ಕಟ್ಟಲು ನಮ್ಮ ಸುದೈವವೆಂಬಂತೆ ಪ್ರಧಾನಿ ಮೋದಿ ಅವರ ನಾಯಕತ್ವ ದೊರೆತಿದೆ. ಎಂಟು ವರ್ಷಗಳಲ್ಲಿ ಹಲವಾರು ಅಡೆತಡೆಗಳನ್ನು ಎದುರಿಸಿದರೂ, ದೇಶ ಹಲವಾರು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುತ್ತಾ, ಇಡೀ ಜಗತ್ತಿಗೆ ಮಾದರಿಯಾಗಿದ್ದೇವೆ ಎಂದ ಬೊಮ್ಮಾಯಿ, ಈ ದೇಶವನ್ನು ಕಟ್ಟಲು ಕೂಲಿ ಕಾರ್ಮಿಕರಿಂದ ಹಿಡಿದು ದೊಡ್ಡ ದೊಡ್ಡ ಕೈಗಾರಿಕೋದ್ಯಮಿಗಳ ತನಕ ಎಲ್ಲರೂ ತಮ್ಮ ತಮ್ಮ ಕೊಡುಗೆ ನೀಡಿ, ದೇಶವನ್ನು ಕಟ್ಟಿದ್ದಾರೆ ಎಂದರು.