ಅನಧಿಕೃತವಾಗಿ ವಿಧಾನಸೌಧಕ್ಕೆ 10 ಲಕ್ಷ ರೂ. ಸಾಗಾಟ; ಸಿಕ್ಕಿಬಿದ್ದ ಅಧಿಕಾರಿ
ಬೆಂಗಳೂರು; ಯಾವುದೇ ದಾಖಲೆ ಇಲ್ಲದೆ ವಿಧಾನಸೌಧಕ್ಕೆ ಹತ್ತು ಲಕ್ಷ ರೂಪಾಯಿ ನಗದು ತೆಗೆದುಕೊಂಡು ಹೋಗುತ್ತಿದ್ದ ಸಹಾಯಕ ಎಂಜಿನಿಯರ್ ಒಬ್ಬರು ಸಿಕ್ಕಿಬಿದ್ದಿದ್ದಾರೆ. ಮಂಡ್ಯ ಮೂಲದ ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್ ಜಗದೀಶ್ ಸಿಕ್ಕಿಬಿದ್ದ ಅಧಿಕಾರಿ.
ನಿನ್ನೆ ಸಂಜೆ ಏಳು ಗಂಟೆ ಸುಮಾರಿಗೆ ಜಗದೀಶ್ ಹತ್ತು ಲಕ್ಷದ ಐವತ್ತು ಸಾವಿರ ರೂಪಾಯಿ ನಗದನ್ನು ವಿಧಾನಸೌಧಕ್ಕೆ ತೆಗೆದುಕೊಂಡು ಹೋಗುತ್ತಿದ್ದರು. ವಿಧಾನಸೌಧದ ಪಶ್ಚಿಮ ದ್ವಾರದ ಮೂಲಕ ಅನಧಿಕೃತವಾಗಿ ಈ ಹಣವನ್ನು ಸಾಗಿಸಲು ಪ್ರಯತ್ನಿಸಲಾಗಿತ್ತು. ಆದ್ರೆ ಗೇಟ್‌ನಲ್ಲಿದ್ದ ಪೊಲೀಸರು ಪರಿಶೀಲನೆ ಮಾಡಿದ್ದು, ಈ ವೇಳೆ ಜಗದೀಶಗಗ ಬಳಿ ಇದ್ದ ಬ್ಯಾಗ್‌ನಲ್ಲಿ ಹಣ ಪತ್ತೆಯಾಗಿದೆ.
ಹಣದ ಮೂಲದ ಬಗ್ಗೆ ಪೊಲೀಸರು ಪ್ರಶ್ನೆ ಮಾಡಿದಾಗ ಯಾವುದೇ ಉತ್ತರ ನೀಡಿಲ್ಲ. ಪೊಲೀಸರು ಹಣವನ್ನು ವಶಪಡಿಸಿಕೊಂಡಿದ್ದು, ಜಗದೀಶ್‌ರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಸಂಬಂಧ ವಿಧಾನಸೌಧ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಯಾವ ಉದ್ದೇಶಕ್ಕಾಗಿ ಜಗದೀಶ್ ಇಷ್ಟು ಮೊತ್ತದ ಹಣವನ್ನು ಕೊಂಡೊಯ್ಯುತ್ತಿದ್ದರು, ಯಾರಿಗೆ ಕೊಡಲು ಈ ಹಣ ತೆಗೆದುಕೊಂಡು ಬಂದಿದ್ದರು ಎಂಬುದರ ಬಗ್ಗೆ ತನಿಖೆ ಮುಂದುವರೆದಿದೆ.