ವರ್ಗಾವಣೆ ದಂಧೆ ಆರೋಪ; ಹೆಚ್ಡಿಕೆ ಸಮಾಧಾನಕ್ಕೆ ಏನೋ ಮಾತಾಡ್ತಾರೆ ಎಂದ ಡಿಕೆಶಿ
ಬೆಂಗಳೂರು; ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಯವರು ವಿದೇಶದಿಂದ ವಾಪಸ್ ಆಗುತ್ತಲೇ ವರ್ಗಾವಣೆ ದಂಧೆ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಗೃಹ ಇಲಾಖೆಯಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ಇದಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ಕುಮಾರಸ್ವಾಮಿಯವರು ಸಮಾಧಾನಕ್ಕೆ ಏನೇನೋ ಮಾತನಾಡುತ್ತಾರೆ. ಮಾತನಾಡಲಿ ಬಿಡಿ ಎಂದು ಹೇಳಿದ್ದಾರೆ. ಪಾಪ ಅವರು ವಿಶ್ರಾಂತಿ ತೆಗೆದುಕೊಂಡು ಬಂದಿದ್ದಾರೆ. ವಿದೇಶದಿಂದ ವಾಪಸ್ ಬಂದು ಏನೋ ಹೇಳುತ್ತಿದ್ದಾರೆ ಹೇಳಲಿ ಬಿಡಿ ಎಂದಿದ್ದಾರೆ.
ಇನ್ನು ಇದೇ ವೇಳೆ ನಾವು ಜನರ ಋಣ ತೀರಿಸಬೇಕಿದೆ. ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸಬೇಕಿದೆ. ಅದರ ಕಡೆ ನಾವು ಗಮನ ಕೊಟ್ಟಿದ್ದೇವೆ ಎಂದೂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಇನ್ನೊಂದು ಕಡೆ ಲೋಕಸಭಾ ಚುನಾವಣೆಯಲ್ಲಿ ಕೂಡಾ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿಕೊಂಡು ಬರೋದಕ್ಕೆ ನಾವು ಸನ್ನದ್ಧರಾಗುತ್ತಿದ್ದೇವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಗುಲ್ಬರ್ಗಾ ಕ್ಷೇತ್ರದ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಆ ಕ್ಷೇತ್ರವನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನಮ್ಮದು. ಖರ್ಗೆಯವರು ದೇಶಾದ್ಯಂತ ಸುತ್ತಾಡಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ನಿಟ್ಟಿನಲ್ಲಿ ಕೆಲಸ ಮಾಡಲಿ. ಅವರ ಬೆನ್ನ ಹಿಂದೆ ನಾವಿದ್ದೇವೆ ಎಂದೂ ಹೇಳಿದ್ದಾರೆ.