Bengaluru

ಕೋವಿಡ್ ನಿರ್ಬಂಧ ಸಡಿಲಿಕೆ: ತಜ್ಞರ ಸಭೆ ನಂತರ ತೀರ್ಮಾನ

ಬೆಂಗಳೂರು: ಕೋವಿಡ್ ನಿಯಮ ಸಡಿಲಿಕೆ ಬಗ್ಗೆ ತಜ್ಞರೊಂದಿಗೆ ಸಭೆ ನಡೆಸಿ ನಂತರ ನಿರ್ಧಾರ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.  ಈ ಬಾರಿಯ ಕೋವಿಡ್ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣ ಕಡಿಮೆಯಿದೆ. ಹಾಗಾಗಿ ದೈನಂದಿನ ಕೆಲಸ ಮಾಡುವ ವೇಳೆ ಕೊರೊನಾ ನಿಯಮಗಳನ್ನು ಪಾಲನೆ ಮಾಡಿದ್ರೆ ಸಾಕು. ಈ ಬಗ್ಗೆ ತಜ್ಞರು ಕೂಡ ಪರಾಮರ್ಶೆ ಮಾಡುತ್ತಿದ್ದು, ಶುಕ್ರವಾರದ ಸಭೆಯಲ್ಲಿ ಸಂಪೂರ್ಣ ಚಿತ್ರಣವನ್ನು ನೀಡಲಿದ್ದಾರೆ. ಆ ಬಳಿಕ ಮುಂದಿನ ತೀರ್ಮಾನದ ಬಗ್ಗೆ ಮಾತನಾಡುವೆ ಎಂದಿದ್ದಾರೆ.

ಫೆಬ್ರವರಿಯಲ್ಲಿ ಕೋವಿಡ್ ಅತೀ ಹೆಚ್ಚಾಗುವ  ನಿರೀಕ್ಷೆಯಿದೆ. ಬೇರೆ ಬೇರೆ ರಾಜ್ಯ ಗಳ ಟ್ರೆಂಡ್ ಪರಿಶೀಲಿಸಿರುವ ತಜ್ಞರು, ನಮ್ಮ ರಾಜ್ಯದಲ್ಲಿ ವಿಳಂಬವಾಗಿ ಪ್ರಾರಂಭವಾದ ಅಲೆ ಜನವರಿ ಅಂತ್ಯ ಅಥವಾ ಫೆಬ್ರವರಿ ಮೊದಲ ವಾರದಲ್ಲಿ ಏರುಗತಿಯನ್ನು ತಲುಪಬಹುದು ಎಂದು ಅಂದಾಜಿಸಲಾಗಿದೆ.

ನಿನ್ನೆ ಕೋವಿಡ್ ನಿಯಂತ್ರಣ ಹಾಗೂ ಲಸಿಕೆ ಕಾರ್ಯಕ್ರಮದ ಕುರಿತು ಡಿಸಿಗಳೊಂದಿಗೆ ವೀಡಿಯೊ ಸಂವಾದ ಮಾಡಿದ್ದೇವೆ. ಲಸಿಕೆ ಪ್ರಮಾಣ ಕಡಿಮೆ ಇರುವ ಜಿಲ್ಲೆಗಳಲ್ಲಿ ಎರಡೂ ಡೋಸ್ ಹಾಗೂ 15-18 ವರ್ಷ ವಯೋಮಾನದವರಿಗೆ, ಕೊರೊನಾ ಯೋಧರಿಗೆ ಲಸಿಕೆ ನೀಡುವಿಕೆಯನ್ನು ತೀವ್ರ ಗತಿಯಲ್ಲಿ ಹೆಚ್ಚಿಸಲು ವಿಶೇಷ ಗಮನ ನೀಡಲು ಸೂಚಿಸಲಾಗಿದೆ. ಶೇ 94 ರಷ್ಟು ಜನ ಹೋಮ್ ಐಸೋಲೇಶನ್ ನಲ್ಲಿರುವುದರಿಂದ ಆರೋಗ್ಯ ಇಲಾಖೆ ಗಮನ ನೀಡಿ ಸೋಂಕಿತರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಟೆಲಿ ಟ್ರಯಾಜಿಂಗ್ ಹಾಗೂ ಔಷಧ ಕಿಟ್ ಗಳನ್ನು ವಿತರಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯರ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮವನ್ನು ಪುನಃ ಪ್ರಾರಂಭಿಸಬೇಕು. ಬೂಸ್ಟರ್ ಡೋಸ್ ಗಳನ್ನು ನೀಡಬೇಕು ಎಂದು ಸೂಚಿಸಲಾಗಿದೆ ಎಂದರು.

Share Post