ಮತದಾರರ ಮಾಹಿತಿಗೆ ಕನ್ನ ಆರೋಪ; ಸಿಎಂಗೆ ವರದಿ ನೀಡಲಿರುವ ಬಿಬಿಎಂಪಿ
ಬೆಂಗಳೂರು; ಮತದಾರರ ಮಾಹಿತಿಗೆ ಕನ್ನ ಆರೋಪ ಪ್ರಕರಣದ ಬಗ್ಗೆ ಬಿಬಿಎಂಪಿ ತನಿಖೆ ನಡೆಸಿದ್ದು, ತನಿಖಾ ವರದಿಯನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಸಲ್ಲಿಸಿದ್ದಾರೆ. ತನಿಖಾ ವರದಿಯಲ್ಲಿ ಚಿಲುಮೆ ಸಂಸ್ಥೆಯ ಬಗ್ಗೆ ಹಲವಾರು ಬೆಚ್ಚಿಬೀಳಿಸುವ ಮಾಹಿತಿ ಇದೆ ಎನ್ನಲಾಗುತ್ತಿದೆ.
ಚಿಲುಮೆ ಸಂಸ್ಥೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಉಚಿತವಾಗಿ ಸರ್ವೇ ನಡೆಸುವುದಾಗಿ ಬಿಬಿಎಂಪಿಯಿಂದ ಅನುಮತಿ ಪಡೆದಿತ್ತು. ಆದ್ರೆ, ಇದನ್ನು ದುರುಪಯೋಗಪಡಿಸಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸುವವರಿಗೆ ಮಾಹಿತಿ ರವಾನೆ ಮಾಡುತ್ತಿತ್ತು ಎಂದು ಹೇಳಲಾಗಿದೆ. ಉಚಿತ ಸರ್ವೇ ನೆಪದಲ್ಲಿ ಪ್ರತಿಯೊಬ್ಬ ಮತದಾರನ ಖಾಸಗಿ ಮಾಹಿತಿ ಕೆಲೆ ಹಾಕುತ್ತಿದ್ದ ಸಂಸ್ಥೆ ಅದನ್ನು ಟಿಕೆಟ್ ಆಕಾಂಕ್ಷಿಗಳಿಗೆ ರವಾನಿಸುತ್ತಿತ್ತು ಎಂದು ಹೇಳಲಾಗುತ್ತಿದೆ.
2018ರ ವಿಧಾನಸಭಾ ಚುನಾವಣೆ ವೇಳೆ ಕೆಲ ಟಿಕೆಟ್ ಆಕಾಂಕ್ಷಿಗಳು ಚಿಲುಮೆ ಸಂಸ್ಥೆ ಮೂಲಕ ತಮ್ಮ ಕ್ಷೇತ್ರದ ಸರ್ವೇ ಮಾಡಿಸಿದ್ದಾರೆ. ಅದಕ್ಕಾಗಿ ಒಬ್ಬೊಬ್ಬರು ಐವತ್ತು ಲಕ್ಷ ರೂಪಾಯಿ ಪಾವತಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಅಕೌಂಟಿಗೆ 20 ಲಕ್ಷ ರೂಪಾಯಿ ನೀಡಿದ್ದರೆ, ಕ್ಯಾಶ್ ರೂಪದಲ್ಲಿ 30 ಲಕ್ಷ ರೂಪಾಯಿಗೂ ಅಧಿಕ ಹಣ ನೀಡಿದ್ದಾರೆ ಎಂಬ ಮಾಹಿತಿ ಇದೆ. ಸರ್ವೇ ನೆಪದಲ್ಲಿ ಚಿಲುಮೆ ಸಂಸ್ಥೆ ಹಣ ನೀಡಿದ ಜನಪ್ರತಿನಿಧಿಗಳಿಗೆ ಮತದಾರರ ಸಂಪೂರ್ಣ ಮಾಹಿತಿ ರವಾನಿಸುತ್ತಿತ್ತು ಎಂದು ಹೇಳಲಾಗುತ್ತಿದೆ. ಈ ಕುರಿತ ವರದಿಯನ್ನು ಬಿಬಿಎಂಪಿ ಸಿದ್ಧಪಡಿಸಿದ್ದು, ಅದರಲ್ಲಿ ಈ ಎಲ್ಲಾ ಮಾಹಿತಿ ಇದೆ ಎಂದು ಹೇಳಲಾಗುತ್ತಿದೆ.