Bengaluru

ಬೆಳಗ್ಗೆ 5ಕ್ಕೆ ಬದಲಾಗಿ 6 ಗಂಟೆಗೆ ಆಜಾನ್‌ ಕೂಗಲು ನಿರ್ಧಾರ

ಬೆಂಗಳೂರು: ರಾಜ್ಯದ ಮಸೀದಿಗಳಲ್ಲಿ ಪ್ರತಿದಿನ ಬೆಳಗಿನ ಜಾವ 5 ಗಂಟೆಯ ಬದಲಾಗಿ 6 ಗಂಟೆಗೆ ಅಜಾನ್ ಕೂಗಲು ಒಮ್ಮತದ ನಿರ್ಣಯಕ್ಕೆ ಬರಲಾಗಿದೆ. ಮುಸ್ಲಿಂ ಧರ್ಮಗುರುಗಳು, ಮೌಲ್ವಿಗಳು ಮತ್ತು ಮುಖಂಡರ ಸಭೆಯಲ್ಲಿ ಈ ಮಹತ್ವದ ನಿರ್ಣಯ ಕೈಗೊಳ್ಳಲಾಗಿದ್ದು,  ರಾಜ್ಯ ಸರ್ಕಾರ ಮತ್ತು ಸುಪ್ರೀಂಕೋರ್ಟ್ ನೀಡಿರುವ ಆದೇಶಗಳನ್ನು ಪಾಲನೆ ಮಾಡಲು ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.

ಅಮೀರ್‌-ಎ-ಷರಿಯತ್‌ ಮೌಲಾನ ಸಗೀರ್‌ ಅಹಮದ್‌ ಅಧ್ಯಕ್ಷತೆಯಲ್ಲಿ ಷರಿಯತ್‌-ಎ-ಹಿಂದ್‌ ಸಂಘಟನೆ ಈ ಸಭೆ ಏರ್ಪಡಿಸಿತ್ತು.  ಸಭೆಯಲ್ಲಿ ತೆಗೆದುಕೊಂಡಿರುವ ತೀರ್ಮಾನ ರಾಜ್ಯದ ಎಲ್ಲ ಭಾಗಗಳಿಗೂ ಅನ್ವಯವಾಗಲಿದೆ. ಎಲ್ಲ ಮಸೀದಿಗಳ ಮುಖಂಡರೂ ಕೂಡ ಒಪ್ಪಿಗೆ ನೀಡಿದ್ದಾರೆ. ಇದಕ್ಕೆ ಯಾರ ವಿರೋಧವೂ ವ್ಯಕ್ತವಾಗಿಲ್ಲ ಎಂದು ಸಭೆಯಲ್ಲಿ ಭಾಗವಹಿಸಿದ್ದ ಮುಖಂಡರು ತಿಳಿಸಿದ್ದಾರೆ.

     ಮುಸ್ಲಿಮರು ಕಾನೂನಿಗೆ ಬೆಲೆ ಕೊಡುವುದಿಲ್ಲ ಎಂಬ ವದಂತಿ ಹರಡಿತ್ತು. ನಾವು ಕಾನೂನು ಪಾಲಿಸುತ್ತೇವೆ. ಕಾನೂನಿಗೆ ಬೆಲೆ ಕೊಡುವುದಿಲ್ಲವೆಂಬ ವದಂತಿಯನ್ನು ಈ ನಿರ್ಧಾರದ ಮೂಲಕ ಸುಳ್ಳು ಎಂದು ಸಾಬೀತು ಮಾಡಿದಂತೆ ಆಗಿದೆ ಎಂದು ಅವರು ಹೇಳಿದ್ದಾರೆ.

Share Post