6 ಸಚಿವರು ಲೋಕಸಭಾ ಅಖಾಡಕ್ಕೆ..?; ಏನಿದು ಕಾಂಗ್ರೆಸ್ ಪ್ಲ್ಯಾನ್..?
ಬೆಂಗಳೂರು; ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 20 ಸೀಟುಗಳನ್ನು ಗೆಲ್ಲೋದಕ್ಕೆ ಕಾಂಗ್ರೆಸ್ ನಾನಾ ಸರ್ಕಸ್ ಮಾಡುತ್ತಿದೆ. ಇದಕ್ಕಾಗಿ ರಾಜ್ಯ ಸರ್ಕಾರದ ಹಾಲಿ ಸಚಿವರನ್ನೇ ಕಣಕ್ಕಿಳಿಸೋಕ್ಕೆ ಚಿಂತನೆ ನಡೆಸಿದೆ. ನ್ಯೂಸ್ ಎಕ್ಸ್ ಕನ್ನಡ ಎರಡು ತಿಂಗಳ ಹಿಂದೆಯೇ ಈ ಮಾಹಿತಿ ನೀಡಿತ್ತು. ಸುಮಾರು ಹತ್ತು ಸಚಿವರನ್ನು ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಸಲಾಗುತ್ತದೆ ಎಂಬ ಸುದ್ದಿಯನ್ನು ನಾವು ಪ್ರಕಟಿಸಿದ್ದೆವು. ಇದೀಗ ಆರು ಸಚಿವರಿಗೆ ಈ ಆಫರ್ ನೀಡಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.
ಬಿಜೆಪಿ-ಜೆಡಿಎಸ್ ಮೈತ್ರಿಯಾಗಿರುವುದರಿಂದ ಈ ಬಾರಿಯೂ ಕಾಂಗ್ರೆಸ್‌ಗೆ ರಾಜ್ಯದಲ್ಲಿ ಕೊಂಚ ಕಷ್ಟ ಇದೆ. ಲೋಕಸಭಾ ಚುನಾವಣೆಯಲ್ಲಿ ಮತ ಪಡೆಯುವುದು, ಗೆಲ್ಲುವುದು ಕಾಂಗ್ರೆಸ್‌ಗೆ ಕಷ್ಟವೇ ಆಗುತ್ತದೆ. ಹೀಗಾಗಿ ಹೇಗಾದರೂ ಮಾಡಿ ಜನರನ್ನು ಒಲಿಸಿಕೊಳ್ಳಲು, ಜನಪ್ರಿಯರಾಗಿರುವ ನಾಯಕರನ್ನೇ ಕಣಕ್ಕಿಳಿಸೋದಕ್ಕೆ ಕಾಂಗ್ರೆಸ್ ಮುಂದಾಗಿದೆ. ಸಿದ್ದರಾಮಯ್ಯ ಸಂಪುಟದಲ್ಲಿರುವ ಆರು ಸಚಿವರಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವಂತೆ ಆಫರ್ ನೀಡಲಾಗಿದೆ.
ಆದ್ರೆ ಆರು ಸಚಿವರಲ್ಲಿ ಇಬ್ಬರು ಮಾತ್ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸೋದಕ್ಕೆ ಒಪ್ಪಿದ್ದಾರೆ. ಉಳಿದ ನಾಲ್ವರು ಲೋಕಸಭೆಯ ಸಹವಾಸವೇ ನಮಗೆ ಬೇಡ ಎನ್ನುತ್ತಿದ್ದಾರೆ ಎನ್ನಲಾಗಿದೆ. ಆದ್ರೆ ಸರ್ವೇಯಲ್ಲಿ ಈ ಆರು ಸಚಿವರು ಸ್ಪರ್ಧೆ ಮಾಡಿದರೆ ಗೆಲ್ಲುತ್ತಾರೆಂಬ ವರದಿ ಬಂದಿದೆ. ಈ ಹಿನ್ನೆಲೆಯಲ್ಲಿ ಆರು ಸಚಿವರನ್ನು ಮನವೊಲಿಸಲು ಕಾಂಗ್ರೆಸ್ ಹೈಕಮಾಂಡ್ ಪ್ರಯತ್ನಿಸುತ್ತಿದೆ ಎಂದು ತಿಳಿದುಬಂದಿದೆ.
ಇನ್ನು ಇನ್ನೊಬ್ಬ ಸಚಿವರು ನನಗೆ ಟಿಕೆಟ್ ಬೇಡ, ನನ್ನ ಮಗನನ್ನು ನಿಲ್ಲಿಸಿ ನಾನು ಗೆಲ್ಲಿಸಿಕೊಂಡು ಬರುತ್ತೇನೆ ಎಂದು ಹೇಳುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಮೈಸೂರು, ಚಾಮರಾಜನಗರ, ಕೋಲಾರ, ಬೆಳಗಾವಿ, ಧಾರವಾಡ, ಹಾಗೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಗಳಲ್ಲಿ ಹಾಲಿ ಸಚಿವರನ್ನು ಕಣಕ್ಕಿಳಿಸಲು ಚಿಂತನೆ ನಡೆದಿದೆ ಎನ್ನಲಾಗಿದೆ.