BengaluruPolitics

ರಾಜ್ಯದಿಂದ ಅಯೋಧ್ಯೆಗೆ 35 ಸಾವಿರ ರಾಮಭಕ್ತರು; ವಿಜಯೇಂದ್ರ

ಬೆಂಗಳೂರು; ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆಯ ನಂತರ ರಾಜ್ಯದಿಂದ ಅಯೋಧ್ಯೆಗೆ 35 ಸಾವಿರಕ್ಕೂ ಅಧಿಕ ರಾಮಭಕ್ತರು ತೆರಳಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ಜನವರಿ 22ರ ಬಳಿಕ 60 ದಿನಗಳ ಅವಧಿಯಲ್ಲಿ 35 ಸಾವಿರಕ್ಕೂ ಹೆಚ್ಚು ಭಕ್ತರು ಅಯೋಧ್ಯೆಗೆ ತೆರಳಿ, ರಾಮನ ದರ್ಶನ ಪಡೆಯಲಿದ್ದಾರೆ ಎಂದು ಹೇಳಿದ್ದಾರೆ.

ರಾಮ ಭಕ್ತರು ಜನವರಿ 31ರಿಂದ ಮಾರ್ಚ್ 25ರವರೆಗೆ ಅಯೋದ್ಯೆಗೆ ವಿವಿಧ ಗುಂಪುಗಳಲ್ಲಿ ಪ್ರಯಾಣ ಮಾಡಲಿದ್ದಾರೆ. ರೈಲಿನಲ್ಲಿ ಪ್ರಯಾಣ ಮಾಡಲಿದ್ದು, ಪ್ರತಿ ರೈಲಿನಲ್ಲಿ 1500 ರಾಮಭಕ್ತರು ತೆರಳಲಿದ್ದಾರೆ. ಒಟ್ಟು 25 ರೈಲುಗಳಲ್ಲಿ ಭಕ್ತರು ತೆರಳಲಿದ್ದಾರೆ. ಅದರ ಖರ್ಚು ವೆಚ್ಚಗಳನ್ನು ಅವರೇ ಭರಿಸಲಿದ್ದಾರೆ ಎಂದು ವಿಜಯೇಂದ್ರ ಹೇಳಿದ್ದಾರೆ. ಹೀಗಾಗಿ ರಾಮ ಭಕ್ತರ ಉತ್ಸಾಹಕ್ಕೆ ಅಡ್ಡಿಯಾಗದಂತೆ ರಾಜ್ಯ ಸರ್ಕಾರ ಕೂಡಾ ಸಹಕಾರ ಕೊಡಬೇಕು ಎಂದು ವಿಜಯೇಂದ್ರ ಆಗ್ರಹಿಸಿದರು.

ಇನ್ನು ಬಾಲರಾಮನ ಪ್ರಾಣಪ್ರತಿಷ್ಠೆಯ ದಿನ ರಾಜ್ಯದ 60 ಕ್ಕೂ ಹೆಚ್ಚು ಪಿವಿಆರ್​​ಗಳಲ್ಲಿ ಪ್ರಾಣ ಪ್ರತಿಷ್ಠೆ ನೇರ ಪ್ರಸಾರ ಇರಲಿದೆ. ಮಂತ್ರಾಕ್ಷತೆ ವಿತರಣೆಗೆ ಜನರಿಂದ ನಿರೀಕ್ಷೆಗೂ ಮೀರಿ ಸ್ಪಂದನೆ ಸಿಕ್ಕಿದೆ ಎಂದು ವಿಜಯೇಂದ್ರ ಇದೇ ವೇಳೆ ತಿಳಿಸಿದರು.

Share Post