ವಿದ್ಯುತ್ ಅಕ್ರಮ ಬಳಕೆ ವಿಚಾರ; ಕುಮಾರಸ್ವಾಮಿಗೆ 68 ಸಾವಿರ ರೂ. ದಂಡ!
ಬೆಂಗಳೂರು;ದೀಪಾವಳಿ ಹಬ್ಬದಂದು ಮಾಜಿ ಸಿಎಂ ಕುಮಾರಸ್ವಾಮಿಯವರು ಜೆಪಿ ನಗರದ ನಿವಾಸಕ್ಕೆ ವಿಶೇಷ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಇದಕ್ಕೆ ವಿದ್ಯುತ್ ನ್ನು ಅನಧಿಕೃತವಾಗಿ ನೇರವಾಗಿ ಕಂಬದಿಂದ ತೆಗೆದುಕೊಳ್ಳಲಾಗಿತ್ತು. ಈ ಬಗ್ಗೆ ಕಾಂಗ್ರೆಸ್ ಆರೋಪ ಮಾಡಿ, ಕುಮಾರಸ್ವಾಮಿ ವಿದ್ಯುತ್ ಕದ್ದಿದ್ದಾರೆ ಎಂದು ಆರೋಪ ಮಾಡಿತ್ತು. ಈ ಹಿನ್ನೆಲೆಯಲ್ಲಿ ಕೇಸ್ ದಾಖಲಿಸಿದ್ದ ಬೆಸ್ಕಾಂ, ಕುಮಾರಸ್ವಾಮಿಯವರಿಗೆ 68 ಸಾವಿರ ರೂಪಾಯಿ ದಂಡ ವಿಧಿಸಿದೆ.
ಕಾಂಗ್ರೆಸ್ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರಿನ ಜಯನಗರದ ಬೆಸ್ಕಾಂ ಜಾಗೃತ ದಳದ ಅಧಿಕಾರಿಗಳು ಹೆಚ್ಡಿಕೆ ಮನೆ ಬಳಿ ಪರಿಶೀಲನೆ ನಡೆಸಿ, ಅನಧಿಕೃತವಾಗಿ ವಿದ್ಯುತ್ ಪಡೆದಿರುವುದನ್ನು ಪತ್ತೆ ಹಚ್ಚಿದ್ದರು. ಅನಂತರ ಪ್ರಕರಣ ದಾಖಲಿಸಲಾಗಿತ್ತು. ಇನ್ನು ಪರಿಶೀಲನೆ ವೇಳೆ ಅಳವಡಿಸಿರುವ ದೀಪಾಲಂಕಾರಕ್ಕೆ ಹತ್ತು ನಿಮಿಷಕ್ಕೆ ಎಷ್ಟು ವಿದ್ಯುತ್ ಖರ್ಚಾಗುತ್ತೆ ಎಂದು ಪರಿಶೀಲಿಸಿದ್ದರು. ಆದರ ಆಧಾರದ ಮೇಲೆ ಎರಡು ದಿನಗಳಿಗೆ ಎಷ್ಟು ವಿದ್ಯುತ್ ಬಳಕೆ ಆಗಿದೆ ಎಂದು ಲೆಕ್ಕ ಹಾಕಿದ್ದಾರೆ.
ಅಧಿಕಾರಿಗಳು ನವೆಂಬರ್ 14ರಂದು ಈ ಬಗ್ಗೆ ವರದಿ ಕೊಟ್ಟಿದ್ದು, ಇದೀಗ ಕುಮಾರಸ್ವಾಮಿಯವರಿಗೆ 68 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ. ಏಳು ದಿನಗಳೊಳಗಾಗಿ ದಂಡ ಕಟ್ಟುವಂತೆ ತಾಕೀತು ಮಾಡಲಾಗಿದೆ.