ಪುಟ್ಟೇನಹಳ್ಳಿಯಲ್ಲಿ ಕೋಟಿ ಕೋಟಿ ಹಣದಿಂದ ಗಣಪತಿಗೆ ಸಿಂಗಾರ
ಬೆಂಗಳೂರು: ಗಣೇಶ ಚತುರ್ಥಿಗೆ ಎಲ್ಲ ಕಡೆ ವಿಭಿನ್ನವಾಗಿ ವಿಶೇಷವಾಗಿ ಗಣೇಶನನ್ನ ಪ್ರತಿಷ್ಠಾಪಿಸಿ ಪೂಜೆ ಪುನಸ್ಕಾರ ಮಾಡುತ್ತಾರೆ. ಅನೇಕ ವರ್ಷಗಳಿಂದ ಗಣೇಶನನ್ನ ಹೀಗೂ ಕೂರಿಸಬಹುದಾ ಅಂತಾ ಅಚ್ಚರಿ ಪಡುವಂತೆ ವಿನಾಯಕನನ್ನ ಕೂರಿಸಿ ಹಬ್ಬ ಮಾಡುತ್ತಾ ಬಂದಿರೋ ಜೆಪಿ ನಗರದ ಬಳಿ ಇರೋ ಪುಟ್ಟೇನಹಳ್ಳಿಯ ಸತ್ಯ ಗಣಪತಿ ಶಿರಡಿ ಸಾಯಿ ಟ್ರಸ್ಟ್ ನವರು ಈ ಬಾರಿ ಅತ್ಯಂತ ವಿಭಿನ್ನವಾದ ಅಲಂಕಾರವನ್ನ ಮಾಡಿದ್ದಾರೆ.
ಗಣೇಶ ಹಬ್ಬದ ಪ್ರಯುಕ್ತ 52.5 ಲಕ್ಷ ರೂ. ಮೊತ್ತದ ನಾಣ್ಯ, ಕೋಟ್ಯಂತರ ರೂ ಮೌಲ್ಯದ ನೋಟುಗಳಿಂದ ಗಣಪತಿಗೆ ವಿಶೇಷ ಅಲಂಕಾರವನ್ನ ಮಾಡಲಾಗಿದೆ. ಇಡೀ ದೇವಾಲಯದ ಆವರಣವನ್ನ 5,10,20 ರೂಪಾಯಿ ಮೌಲ್ಯದ ನಾಣ್ಯಗಳು ಮತ್ತು 10, 20, 50, 100, 200, 500 ರೂಪಾಯಿ ನೋಟ್ಗಳನ್ನ ಬಳಸಿಕೊಂಡು ಹೂವಿನಂತೆ ಮಾಲೆಗಳನ್ನ ಮಾಡಿ ಅಲಂಕಾರ ಮಾಡಿದ್ದಾರೆ.
ಸರಿಸುಮಾರು 2.5 ಕೋಟಿ ಮೌಲ್ಯದ ನೋಟು ಮತ್ತು ನಾಣ್ಯಗಳ ಮೂಲಕ ಅಲಂಕಾರ ಮಾಡಿದ್ದು, ಇದಕ್ಕಾಗಿ 150 ಜನ ಒಂದು ತಿಂಗಳಿಂದ ಶ್ರಮಿಸಿದೆ. ಯಾವುದೇ ಸಮಸ್ಯೆಗಳು ಆಗದಂತೆ 25 ಜನ ಸೆಕ್ಯೂರಿಟಿ ಮತ್ತು ಇಡೀ ದೇವಾಲಯದಲ್ಲಿ ಸಿಸಿಟಿವಿ ಆಳವಡಿಸಿದ್ದಾರೆ. ಭಕ್ತಿರಿಗೆ ದೇವರ ದರ್ಶನಕ್ಕೆ ಬ್ಯಾರಿಕೇಟ್ ಹಾಕಿ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ. ನಾಣ್ಯಗಳಿಂದಲೇ ಗಣೇಶನ ಫೋಟೋಗಳು, ಭಾರತದ ನಕ್ಷೆ, ಕರ್ನಾಟಕದ ನಕ್ಷೆ, ಚಂದ್ರಯಾನದ ಚಿತ್ರ ಸೇರಿದಂತೆ ಜೈ ಜವಾನ್ ಜೈ ಕಿಸಾನ್ ಚಿತ್ರಗಳನ್ನ ಮಾಡಿದ್ದಾರೆ. ಈ ಅಲಂಕಾರ ನೋಡಿದ ಭಕ್ತರು ಸಹ ತುಂಬಾ ಸಂತೋಷಗೊಂಡಿದ್ದಾರೆ.