ಕೊಪ್ಪಳ : ಸೀಮಿತ ಭಕ್ತರ ನಡುವೆ ಗವಿ ಮಠದ ಜಾತ್ರೆ
ಕೊಪ್ಪಳ : ಶ್ರೀ ಸಂಸ್ಥಾನ ಗವಿಮಠದ ಗವಿಸಿದ್ಧೇಶ್ವರ ರಥೋತ್ಸವ ನಸುಕಿನ ಜಾವ 4.15ರಲ್ಲಿ ಜಾತ್ರೆ ನಡೆಸಲಾಯಿತು. ಕೋವಿಡ್ ರೂಲ್ಸ್ ಗಳ ನಿಯಮದ ಅನುಸಾರ ಸೀಮಿತ ಜನರನ್ನು ಮಾತ್ರ ಸೇರಿಸಿ ಸರಳವಾಗಿ ಜಾತ್ರೆ ನಡೆಸಲಾಗಿದೆ.
ಮಂಗಳವಾರ ತಡರಾತ್ರಿಯವರೆಗೂ ರಥವನ್ನು ಯಾವ ಸಮಯದಲ್ಲಿ ಎಳೆಯಬೇಕು ಎಂಬ ಅಧಿಕೃತ ಮಾಹಿತಿಯನ್ನು ಸಾರ್ವಜನಿಕರಿಗೆ ಮಠದ ಆಡಳಿತ ವರ್ಗದವರು ಹೇಳಿರಲಿಲ್ಲ. ಹೆಚ್ಚಿನ ಜನ ಸೇರುವುದನ್ನು ತಡೆಗಟ್ಟಲು ಆಡಳಿತ ಮಂಡಳಿ ಈ ರೀತಿ ಮಾಡಿತು.
ಕೋವಿಡ್ ನಿರ್ಬಂಧದ ನಡುವೆಯೂ ರಾತ್ರಿಯೆಲ್ಲಾ ಕಾದು ಕುಳಿತಿದ್ದ ಸಾವಿರಾರು ಜನ ರಥೋತ್ಸವವನ್ನು ಕಣ್ತುಂಬಿಕೊಂಡರು. ಇನ್ನು ಕೋವಿಡ್ ನಿಯಮ ಪಾಲನೆಯನ್ನು ಜನರು ಗಾಳಿಗೆ ತೂರದಂತೆ ಕಾನೂನು ವ್ಯವಸ್ಥೆ ಕಾಪಾಡಲು ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತು.
ಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಅವರ ನೇತೃತ್ವದಲ್ಲಿ ಸಾಂಪ್ರದಾಯಿಕವಾಗಿ ತೇರು ಎಳೆಯಲಾಯಿತು. ನಂತರ ರುದ್ರಾಭಿಷೇಕ, ಪಲ್ಲಕ್ಕಿ ಮೆರವಣಿಗೆಯನ್ನು ನಡೆಸಲಾಯಿತು.