ಪರೀಕ್ಷೆ ಮಾಡಲು ಬಂದವರಿಗೇ ಕೊರೊನಾ ಇದೆ: ಡಿ.ಕೆ.ಸುರೇಶ್
ಕನಕಪುರ: ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಲು ಡಿ.ಕೆ.ಶಿವಕುಮಾರ್ ನಿರಾಕರಿಸಿದರು ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಂಸದ ಡಿ.ಕೆ.ಸುರೇಶ್ ಪರೀಕ್ಷೆ ಮಾಡಿಸಿಕೊಳ್ಳಲು ನಮಗೆ ಯಾವ ರೋಗ ಲಕ್ಷಣಗಳೂ ಇಲ್ಲ. ನಾವು ಆರೋಗ್ಯವಾಗಿದ್ದೇವೆ. ಕೊರೊನಾ ಬಂದಿರುವುದು ಬಿಜೆಪಿಯವರಿಗೆ. ನಮಗೆ ಕೊರೊನಾ ಪರೀಕ್ಷೆ ಮಾಡಿಸಲು ಕಳಿಸಿದ ಅಧಿಕಾರಿಗೆ ಕೊರೊನಾ ಬಂದಿದೆ. ಯೆಸ್, ಅವರು ಕಳಿಸಿದ ಅಧಿಕಾರಿ ಕೊರೊನಾ ಸೋಂಕಿತ ವ್ಯಕ್ತಿ. ಆತನಿಂದ ಡಿ.ಕೆ.ಶಿವಕುಮಾರ್ ಅವರಿಗೆ ಸೋಂಕು ಬರಲಿ ಎಂದು ಪಾಸಿಟಿವ್ ಬಂದಿರುವ ಅಧಿಕಾರಿಯನ್ನು ನಮ್ಮ ಬಳಿ ಕಳಿಸಿದ್ದಾರೆ. ನಮ್ಮ ಪಾದಯಾತ್ರೆಯನ್ನು ನಿಲ್ಲಿಸಲು ಇಲ್ಲಿನವರಿಗೆ ಕೊರೊನಾ ಸೋಂಕು ಹರಡಲಿ ಎಂದು ಬಿಜೆಪಿ ಮಾಡಿರುವ ಪ್ಲಾನ್ ಇದು. ನಮ್ಮ ಆರೋಗ್ಯದ ಮೇಲೆ ಕಾಳಜಿ ಇಲ್ಲ, ಬದಲಾಗಿ ಪಾದಯಾತ್ರೆಯಿಂದ ಕೊರೊನಾ ಬಂತು ಎಂದು ಸಾರುವುದಕ್ಕೆ ಸೋಂಕಿತ ವ್ಯಕ್ತಿಯನ್ನು ನಮ್ಮ ಬಳಿ ಕಳಿಸಿದ್ದಾರೆ. ಇಲ್ಲಿ ಯಾರಿಗಾದ್ರು ಒಬ್ಬರಿಗೆ ಕೊರೊನಾ ಬಂದ್ರು ಅದಕ್ಕೆ ನೇರ ಕಾರಣ ಬಿಜೆಪಿ ನಾಯಕರೇ ಹೊಣೆ.
ಸುಮ್ಮನೆ ಇಲ್ಲಸಲ್ಲದ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಕೊರೊನಾ ಮಾಫಿಯಾ ಶುರು ಮಾಡ್ಕೊಂಡಿದ್ದಾರೆ. ಇಷ್ಟ ಬಂದಷ್ಟು ಬೇಕಂತಲೇ ಸೋಂಕಿತರ ಸಂಖ್ಯೆಯನ್ನು ಹೆಚ್ಚಾಗಿ ತೋರಿಸುತ್ತಿದ್ದಾರೆ. ಯಾರಾದ್ರೂ ಐಸಿಯುನಲ್ಲಿ ಸೇರಿದ್ದಾರಾ..? ಒಂದಾದ್ರೂ ಸಾವು ಸಂಭವಿಸಿದೆಯಾ? ಇದೆಲ್ಲಾ ಹಣ ಮಾಡೋದಕ್ಕೆ ಬಿಜೆಪಿ ಮಾಡ್ತಿರುವ ಗಿಮಿಕ್ ಎಂದು ಕಿಡಿ ಕಾರಿದ್ದಾರೆ.
ನಮ್ಮ ಪಾದಯಾತ್ರೆಯನ್ನು ಹತ್ತಿಕ್ಕಲು ಬಿಜೆಪಿ ನಾನಾ ಪ್ರಯತ್ನಗಳನ್ನು ಮಾಡ್ತಿದೆ. ಈಗಾಗಲೇ ಮೂವತ್ತು ಕಾಂಗ್ರೆಸ್ ನಾಯಕರ ವಿರುದ್ಧ ಕೇಸ್ ದಾಖಲು ಮಾಡಿದ್ದಾರೆ. ಏನ್ ಮಾಡ್ತಾರೋ ಎಲ್ಲಾ ಪ್ರಯತ್ನಗಳನ್ನು ಅವರು ಮಾಡಲಿ. ನಾವು ಜನರಿಗಾಗಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಜನ, ದೇವರು ನಮ್ಮ ಪರವಾಗಿ ಇದ್ದಾರೆ ನಮಗೆ ಒಳ್ಳೆಯದೇ ಆಗುತ್ತದೆ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದ್ರು.