ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ; ಮಧ್ಯಾಹ್ನ ದಿನಾಂಕ ಘೋಷಣೆ
ನವದೆಹಲಿ: ಮುಂಬರುವ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಗೆ ಇಂದು ಮುಹೂರ್ತ ನಿಗದಿಯಾಗಲಿದೆ. ಇಂದು ಮಧ್ಯಾಹ್ನ 3.30ಕ್ಕೆ ಕೇಂದ್ರ ಚುನಾವಣಾ ಆಯೋಗ ಸುದ್ದಿಗೋಷ್ಠಿ ಕರೆದಿದ್ದು, ಚುನಾವಣಾ ಅಧಿಸೂಚನೆ ಹೊರಡಿಸಲಿದೆ.
ಉತ್ತರ ಪ್ರದೇಶ್, ಪಂಜಾಬ್, ಗೋವಾ, ಉತ್ತರಾಖಂಡ್ ಹಾಗೂ ಮಣಿಪುರದಲ್ಲಿ ಚುನಾವಣೆ ಎದುರಾಗಿದ್ದು, ಇಂದು ಚುನಾವಣಾ ದಿನಾಂಕ ಪ್ರಕಟವಾಗಲಿದೆ. ನವದೆಹಲಿಯಲ್ಲಿ ಇಂದು ಮಧ್ಯಾಹ್ನ 3 ಗಂಟೆಗೆ ವಿಜ್ಞಾನ ಭವನದಲ್ಲಿ ಕೇಂದ್ರ ಚುನಾವಣಾ ಆಯುಕ್ತರು ಚುನಾವಣೆಯ ಅಧಿಸೂಚನೆಯನ್ನು ಹೊರಡಿಸಲಿದ್ದಾರೆ.
ದೇಶದಲ್ಲಿ ಕೊರೊನಾ ೩ನೇ ಅಲೆ ಶುರುವಾಗಿದೆ. ಎಲ್ಲೆಡೆ ಕೊರೊನಾ ಹಬ್ಬುತ್ತಿದೆ. ಇಂತಹ ಸಂದರ್ಭದಲ್ಲಿ ಚುನಾವಣೆ ಎದುರಾಗುತ್ತಿದೆ. ಅಂದಹಾಗೆ ಕೊರೊನಾ ಇರುವುದರಿಂದಾಗಿ ಚುನಾವಣೆಯನ್ನು ಮುಂದೂಡಲಾಗುತ್ತದೆ ಎಂದು ಹೇಳಲಾಗಿತ್ತು. ಆದ್ರೆ ಚುನಾವಣಾ ಆಯೋಗ ಕೊರೊನಾ ಭೀತಿಯ ನಡುವೆಯೇ ಸುದ್ದಿಗೋಷ್ಠಿ ಕರೆದಿದೆ.
ಕೊರೊನಾ ಜಾಸ್ತಿಯಾಗುತ್ತಿದೆ. ಜೊತೆಗೆ ಫೆಬ್ರವರಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗಲಿದೆ ಎಂದು ತಜ್ಞರು ಹೇಳಿದ್ದಾರೆ. ಹೀಗಾಗಿ ಒಂದು ವೇಳೆ ಚುನಾವಣೆ ಘೋಷಣೆಯಾದರೆ ಫೆಬ್ರವರಿಯಲ್ಲೇ ನಡೆಯಬೇಕಿದೆ. ಹೀಗಾಗಿ ರಾಜಕಾರಣಿಗಳು ದೊಡ್ಡ ಮಟ್ಟದ ಪ್ರಚಾರ ಸಭೆಗಳು , ರ್ಯಾಲಿಗಳು ಮಾಡಿದರೆ ಕೊರೊನಾ ಮತ್ತಷ್ಟು ಜಾಸ್ತಿಯಾಗಲಿದೆ. ಹೀಗಾಗಿ ಚುನಾವಣಾ ದಿನಾಂಕ ಪ್ರಕಟಿಸುವ ಚುನಾವಣಾ ಆಯೋಗ, ಪ್ರಚಾರಕ್ಕೆ ಪ್ರತ್ಯೇಕ ಗೈಡ್‌ಲೈನ್ಸ್ ರೂಪಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.