National

ಇಲ್ಲಿ ಬೋರ್‌ವೆಲ್‌ನಿಂದ ಬರ್ತಿದೆ ಅಡುಗೆ ಅನಿಲ..!

ಅಳಪ್ಪುಳ: ಅಡುಗೆ ಅನಿಲದ ಬೆಲೆ ಗಗನಕ್ಕೇರುತ್ತಿದೆ ಅಂತ ಎಲ್ಲರೂ ತಲೆಕೆಡಿಸಿಕೊಂಡಿದ್ದಾರೆ. ಆದ್ರೆ ಕೇರಳದ ಒಂದು ಮನೆಯವರು ಮಾತ್ರ, ಗ್ಯಾಸ್‌ ಬೆಲೆಗೂ ನಮಗೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಯಾಕಂದ್ರೆ, ಅವ್ರಿಗೆ ಮನೆ ಬಳಿಯೇ ಬೋರ್‌ವೆಲ್‌ನಿಂದಲೇ ಗ್ಯಾಸ್‌ ಬರುತ್ತಿದೆ. ವಿಚಿತ್ರ ಆದರೂ ಇದು ನಿಜ. ಕಳೆದ ಒಂಭತ್ತು ವರ್ಷಗಳಿಂದ ಈ ಮನೆಯವರು ಮನೆ ಪಕ್ಕದ ಬೋರ್‌ವೆಲ್‌ನಿಂದ ಪೂರೈಕೆಯಾಗುತ್ತಿರುವ ಗ್ಯಾಸ್‌ನಿಂದಲೇ ಅಡುಗೆ ಮಾಡುತ್ತಿದ್ದಾರೆ.

     ಕೇರಳದ ಅಳಪ್ಪುಳ ಜಿಲ್ಲೆಯ ಅರಟ್ಟುವಾಜಿ ಗ್ರಾಮದಲ್ಲಿ ಇಂತಹದ್ದೊಂದು ವಿಚಿತ್ರ ನಡೆಯುತ್ತಿದೆ. ಇಲ್ಲಿನ ನಿವಾಸಿ ರತ್ನಮ್ಮ ಎಂಬುವವರ ಮನೆ ಪಕ್ಕ ಬೋರ್‌ವೆಲ್‌ ಕೊರೆಸಲಾಗಿತ್ತು. ಅದ್ರಲ್ಲಿ ನೀರು ಬಂದಿರಲಿಲ್ಲ. ಆದ್ರೆ ಒಂಬತ್ತು ವರ್ಷಗಳ ಹಿಂದೆ, ಆ ಬೋರ್‌ವೆಲ್‌ಗೆ ಅಳವಡಿಸಿದ್ದ ಪೈಪ್‌ ಅಗಲ ಮಾಡಲು ಬೆಂಕಿ ಕಡ್ಡಿ ಗೀರಿದ್ದಾರೆ. ಈ ವೇಳೆ ಬೆಂಕಿ ದೊಡ್ಡದಾಗಿ ಹೊತ್ತಿ ಉರಿದಿದೆ. ಅನಂತರ ಆ ಪೈಪ್‌ನಿಂದ ಯಾವಾಗಲೂ ಅನಿಲ ವಾಸನೆ ಬರುತ್ತಿತ್ತಂತೆ. ಇದನ್ನು ಕಂಡ ಮನೆಯವರು ಅದೇ ಪೈಪ್‌ನ್ನು ಮನೆ ಅಡುಗೆ ಸ್ಟವ್‌ಗೆ ಅಳವಡಿಸಿದ್ದಾರೆ.

ಗಣಿಭೂವಿಜ್ಞಾನ ಇಲಾಖೆ ಅಧಿಕಾರಿಗಳೂ ಇದನ್ನು ಪರಿಶೀಲನೆ ಮಾಡಿದ್ದು, ಬೋರ್‌ವೆಲ್‌ನಿಂದ ಬರುತ್ತಿರುವುದು ಮೀತೇನ್‌ ಅನಿಲ ಎಂಬುದನ್ನು ದೃಢಪಡಿಸಿದ್ದಾರೆ. ಆದರೆ ಕೆಲದಿನಗಳ ಬಳಿಕ ಇದು ನಿಂತುಹೋಗುತ್ತದೆ ಎಂದು ಹೇಳಿದ್ದಾರೆ. ಆದರೆ ರತ್ನಮ್ಮ ಮನೆಯವರು, ಕಳೆದ ಒಂಭತ್ತು ವರ್ಷಗಳಿಂದ ಇದೇ ಅನಿಲವನ್ನು ಬಳಕೆ ಮಾಡುತ್ತಿದ್ದಾರೆ. ಮಳೆ ಜಾಸ್ತಿದಾಗ ಮಾತ್ರ ಅನಿಲ ನಿಂತುಹೋಗುತ್ತದಂತೆ.

 

Share Post