ಕರ್ತವ್ಯಕ್ಕೆ ಹಾಜರಾಗಲು ಅಧಿಕಾರಿಗಳಿಗೆ ಸರ್ಕಾರ ಖಡಕ್ ಸೂಚನೆ
ಬೆಂಗಳೂರು: ಕೊರೊನಾ ಮೂರನೇ ಅಲೆ ಹಾಗೂ ರೂಪಾಂತರಿ ವೈರಸ್ ಓಮಿಕ್ರಾನ್ ಅನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಈಗಾಗಲೇ ಹಲವು ನಿಯಮಾವಳಿಗಳನ್ನು ಜಾರಿಗೆ ತಂದಿದೆ. ಸರ್ಕಾರಿ ಅಧಿಕಾರಿಗಳಿಗೆ ವಾರಕ್ಕೆ ಐದು ದಿನ ಎಂದು ಘೋಷಣೆ ಮಾಡಿದ್ದ ಸರ್ಕಾರ, ಇದೀಗ ತಿದ್ದುಪಡಿ ಮಾಡಿ ಎಲ್ಲಾ ಅಧಿಕಾರಿಗಳು ಕಡ್ಡಾಯವಾಗಿ ಕೆಲಸಕ್ಕೆ ಹಾಜರಾಗುವಂತೆ ಕರ್ನಾಟಕ ಸಚಿವಾಲಯ ಸುತ್ತೋಲೆ ಹೊರಡಿಸಿದೆ. ಇನ್ನೂ ಹೆಚ್ಚಿನ ಕಟ್ಟುನಿಟ್ಟಿನ ಅತ್ಯಗತ್ಯ ಸೇವೆಗಳನ್ನು ಒದಗಿಸುತ್ತಿರುವ ಇಲಾಖೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಎಲ್ಲಾ ವರ್ಗದ ಅಧಿಕಾರಿಗಳು, ಸಿಬ್ಬಂದಿ ಕೂಡಲೇ ಕರ್ತವ್ಯಕ್ಕೆ ಹಾಜರಾಗತಕ್ಕದ್ದು ಎಂದು ಆದೇಶಿಸಿದೆ. ಇನ್ನುಳಿದ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವ ಗ್ರೂಪ್ ಎ ಅಧಿಕಾರಿಗಳು ಗೈರಾಗದೆ ಕಡ್ಡಾಯವಾಗಿ ಹಾಜರಾಗಲು ಸೂಚಿಸಿದೆ. ಬಿ, ಸಿ, ಮತ್ತು ಡಿ ಗ್ರೂಪ್ ನೌಕರರು ಶಿಫ್ಟ್ ವೈಸ್ ಅಥವಾ ೫೦-೫೦ ಮೇಲೆ ಕರ್ತವ್ಯಕ್ಕೆ ಹಾಜರಾಗುವಂತೆ ತಿಳಿಸಿದೆ.
ಕೊರೊನಾ ಕರ್ತವ್ಯಕ್ಕೆ ನಿಯೋಜಿಸಿರುವ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗಿ, ಕೆಲಸ ನಿರ್ವಹಿಸುವಂತೆ ಖಡಕ್ಕಾಗಿ ಆದೇಶಿಸಿದೆ. ದೃಷ್ಟಿಹೀನ, ವಿಕಲಾಂಗ ಸಿಬ್ಬಂದಿ, ಗರ್ಭಿಣಿ ಮಹಿಳಾ ಸಿಬ್ಬಂದಿಗೆ ಕರ್ತವ್ಯ ನಿರ್ವಹಣೆಯಿಂದ ವಿನಾಯಿತಿ ನೀಡಲಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಿದೆ