CrimeNational

ನಕಲಿ ಕೋರ್ಟ್ ನಡೆಸುತ್ತಿದ್ದ ವ್ಯಕ್ತಿ ಅರೆಸ್ಟ್!

ಅಹಮದಾಬಾದ್‌: ಗುಜರಾತ್‌ನ ಗಾಂಧಿನಗರದಲ್ಲಿ ನ್ಯಾಯಾಧೀಶನೆಂದು ಹೇಳಿಕೊಂಡು ನಕಲಿ ನ್ಯಾಯಾಲಯ ನಡೆಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಮೋರ್ರಿಸ್‌ ಸ್ಯಾಮ್ಯುಯೆಲ್‌ ಕ್ರಿಶ್ಚಿಯನ್ ಬಂಧಿತ ಆರೋಪಿ. ಈತ 2019ರಿಂದ ಭೂವಿವಾದ ಸೇರಿದಂತೆ ಹಲವು ಪ್ರಕರಣಗಳಲ್ಲಿ ತೀರ್ಪು ನೀಡಿ ಜನರಿಗೆ ಮೋಸ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ, ‘ಭೂವಿವಾದದಲ್ಲಿ ಸಿಲುಕಿರುವ ಅಪರಿಚಿತ ವ್ಯಕ್ತಿಗಳನ್ನು ಪತ್ತೆ ಮಾಡಿ, ತಾನು ನ್ಯಾಯಾಧೀಶ, ಸಮಸ್ಯೆ ಬಗೆಹರಿಸುವುದಾಗಿ ಹೇಳಿಕೊಂಡು ಅವರಿಂದ ಭಾರಿ ಪ್ರಮಾಣದಲ್ಲಿ ಹಣ ಪಡೆಯುತ್ತಿದ್ದ. ಆತನೊಂದಿಗೆ ಇರುವವರು ಕೋರ್ಟ್‌ನಲ್ಲಿ ಕೆಲಸ ಮಾಡುವವರಂತೆ ತೋರಿಸಿಕೊಳ್ಳುತ್ತಿದ್ದರು. ಗಾಂಧಿನಗರದಲ್ಲಿ ನಿರ್ಮಿಸಿಕೊಂಡಿದ್ದ ಥೇಟ್‌ ನ್ಯಾಯಾಲಯದಂತೆಯೇ ಇದ್ದ ಸೆಟ್‌ನಲ್ಲಿ ಅವರಿಗೆ ನ್ಯಾಯ ಕೊಡಿಸುವ ನಾಟಕವಾಡಿ ಹಣ ಪಡೆದವರ ಪರವಾಗಿ ತೀರ್ಪು ನೀಡುತ್ತಿದ್ದ. ಕ್ರಿಶ್ಚಿಯನ್ ವೈಯಕ್ತಿಕ ಲಾಭಕಾಗಿ ನ್ಯಾಯಾಲಯವನ್ನು ದುರ್ಬಳಕೆ ಮಾಡಿಕೊಂಡಿದ್ದಾನೆ’ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

‘2019ರಲ್ಲಿ ವ್ಯಕ್ತಿಯೊಬ್ಬ, ಜಿಲ್ಲಾಧಿಕಾರಿಗಳ ಅಧೀನದಲ್ಲಿದ್ದ ಸರ್ಕಾರಿ ಜಮೀನಿನ ಮೇಲೆ ಹಕ್ಕು ಸಾಧಿಸಿ, ಕಂದಾಯ ಇಲಾಖೆಯಲ್ಲಿ ತನ್ನ ಹೆಸರನ್ನು ಸೇರಿಸಲು ಬಯಸಿದ್ದ. ಈ ಪ್ರಕರಣದಲ್ಲಿ ಕ್ರಿಶ್ಚಿಯನ್ ದುಡ್ಡು ಪಡೆದ ವ್ಯಕ್ತಿಯ ಪರವಾಗಿ ತೀರ್ಪು ನೀಡಿದ್ದ. ಈಗ ಆ ಆದೇಶವನ್ನು ಜಾರಿಗೆ ತರಲು, ನಕಲಿ ದಾಖಲೆಗಳೊಂದಿಗೆ ವಕೀಲರೊಬ್ಬರ ಮೂಲಕ ನಗರದ ಸಿವಿಲ್‌ ನ್ಯಾಯಾಲಯಕ್ಕೆ ಕ್ರಿಶ್ಚಿಯನ್ ಅರ್ಜಿ ಸಲ್ಲಿಸಿದ್ದ. ಸಲ್ಲಿಸಿದ್ದ ದಾಖಲೆಗಳು ನಕಲಿ ಎಂಬುದನ್ನು ಪತ್ತೆ ಮಾಡಿದ್ದ ರಿಜಿಸ್ಟ್ರಾರ್‌ ಅವರು, ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ಕೈಗೊಂಡ ಪೊಲೀಸರು ಈತ ನಡೆಸುತ್ತಿದ್ದ ನಕಲಿ ನ್ಯಾಯಾಲಯವನ್ನು ಪತ್ತೆ ಮಾಡಿದ್ದಾರೆ.

Share Post