BengaluruPolitics

ರಾಜ್ಯಪಾಲರಿಗೆ ಸಲಹೆ ನೀಡುವ ಅಧಿಕಾರ ಸಂಪುಟಕ್ಕಿದೆಯಾ..?

ಬೆಂಗಳೂರು(Bengaluru); ಮುಡಾ ಹಗರಣದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿದ್ದಾರೆ.. ಆದ್ರೆ, ಇದರ ವಿರುದ್ಧ ಕಾಂಗ್ರೆಸ್‌ ಹೋರಾಟ ನಡೆಸುತ್ತಿದೆ.. ಬಿಜೆಪಿ ಹಾಗೂ ಜೆಡಿಎಸ್‌ ನಾಯಕರ ಪ್ರಕರಣಗಳ ಬಗ್ಗೆ ರಾಜ್ಯಪಾಲರು ಯಾವುದೇ ತೀರ್ಮಾನ ಕೈಗೊಂಡಿಲ್ಲ.. ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ತರಾತುರಿ ಆದೇಶ ಹೊರಡಿಸಿದ್ದಾರೆ ಎಂದು ಕಾಂಗ್ರೆಸ್‌ ನಾಯಕರು ಆರೋಪ ಮಾಡುತ್ತಿದ್ದಾರೆ.. ಇದಲ್ಲದೆ ಈ ಬಗ್ಗೆ ನಡೆದ ಎರಡು ಸಂಪುಟ ಸಭೆಗಳಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಸೇರಿದಂತೆ ಹಲವು ನಾಯಕರ ವಿರುದ್ಧದ ಪ್ರಕರಣಗಳ ಬಗ್ಗೆಯೂ ವಿಚಾರಣೆಗೆ ಅನುಮತಿ ನೀಡುವಂತೆ ರಾಜ್ಯಪಾಲರಿಗೆ ಆಗ್ರಹ ಪೂರ್ವಕ ಸಲಹೆ ನೀಡಲು ನಿರ್ಧಾರ ಮಾಡಲಾಗಿದೆ..

ಇದನ್ನೂ ಓದಿ; ಮೈಸೂರು ಬಳಿ ಭಾರೀ ಪ್ರಮಾಣದ ಸ್ಫೋಟಕ ಪತ್ತೆ!

ಸಂವಿಧಾನದ 163ನೇ ವಿಧಿ ಅನ್ವಯ ಎರಡೂ ಸಂಪುಟ ಸಭೆಗಳಲ್ಲಿ ನಿರ್ಧಾರ ಕೈಗೊಳ್ಳಲಾಗಿದ್ದು, ರಾಜ್ಯಪಾಲರಿಗೆ ಈ ಮೂಲಕ ತಿರುಗೇಟು ನೀಡಲಾಗಿದೆ.. ಮೊದಲಿಗೆ ಸಿದ್ದರಾಮಯ್ಯ ಅವರನ್ನು ಹೊರಗಿಟ್ಟು ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ಸಂಪುಟ ಸಭೆ ನಡೆಸಲಾಗಿತ್ತು. ಅನಂತರ ಈಗ ಸಿದ್ದರಾಮಯ್ಯ ನೇತೃತ್ವದಲ್ಲಿ ಸಂಪುಟ ಸಭೆ ನಡೆಸಲಾಗಿದೆ.. ಮೊದಲ ಸಭೆಯಲ್ಲಿ ಸಿದ್ದರಾಮಯ್ಯ ಅವರ ವಿರುದ್ಧ ಯಾವುದೇ ತನಿಖೆ ನಡೆದಿಲ್ಲ. ಖಾಸಗಿ ದೂರು ಆಧರಿಸಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಬಾರದು ಎಂದು 90 ಪುಟಗಳ ನಿರ್ಣಯ ಕೈಗೊಂಡು ರಾಜ್ಯಪಾಲರಿಗೆ ಕಳುಹಿಸಲಾಗಿತ್ತು.. ಆದರೂ ಕೂಡಾ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ.. ಹೀಗಾಗಿ ಸಿದ್ದರಾಮಯ್ಯ ನೇತೃತ್ವದಲ್ಲಿ ಮತ್ತೊಂದು ಸಂಪುಟ ಸಭೆ ನಡೆಸಲಾಗಿದೆ. ಈ ಸಭೆಯಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ, ಮಾಜಿ ಸಚಿವ ಜನಾರ್ದನರೆಡ್ಡಿ ವಿರುದ್ಧ ತನಿಖೆಯಾಗಿ ಚಾರ್ಜ್‌ಶೀಟ್‌ಗೆ ಸಲ್ಲಿಸಬೇಕಿದೆ. ಅದಕ್ಕೆ ರಾಜ್ಯಪಾಲರ ಅನುಮತಿ ಬೇಕು. ಇದರ ಜೊತೆಗೆ ಕಳೆದ ಸರ್ಕಾರದಲ್ಲಿ ಸಚಿವರಾಗಿದ್ದ ಶಶಿಕಲಾ ಜೊಲ್ಲೆ ಹಾಗೂ ಮರುಗೇಶ್‌ ನಿರಾಣಿ ವಿರುದ್ಧದ ಪ್ರಕರಣಗಳ ತನಿಖೆಗೂ ಅನುಮತಿ ನೀಡುವಂತೆ ಆಗ್ರಹ ಪೂರ್ವಕವಾಗಿ ರಾಜ್ಯಪಾಲರಿಗೆ ಮನವಿ ಮಾಡೋದಕ್ಕೆ ನಿರ್ಧಾರ ಮಾಡಲಾಗಿದೆ..

ಇದನ್ನೂ ಓದಿ; ಶವಗಳ ಪಕ್ಕದಲ್ಲೇ ನಡೆಯಿತು ಲೈಂಗಿಕ ಕ್ರಿಯೆ; ಸಾರ್ವಜನಿಕರ ಆಕ್ರೋಶ!

ನ್ಯಾಯ ಪ್ರಕ್ರಿಯೆಗಳನ್ನು ಸುಗವಾಗಿ ಮಾಡಲು ಸಚಿವ ಸಂಪುಟದಿಂದ ರಾಜ್ಯಪಾಲರಿಗೆ ನೆರವು ಹಾಗೂ ಸಲಹೆ ನೀಡುವ ಅವಕಾಶವಿದೆ.. ಈ ಅವಕಾಶವನ್ನು ಬಳಸಿಕೊಂಡೇ ರಾಜ್ಯ ಸಚಿವ ಸಂಪುಟ ಕುಮಾರಸ್ವಾಮಿ ಸೇರಿದಂತೆ ಮತ್ತಿತರರ ಪ್ರಕರಣಗ ಬಗ್ಗೆ ರಾಜ್ಯಪಾಲರಿಗೆ ಸಲಹೆ ಕೊಡಲು ನಿರ್ಧಾರ ಕೈಗೊಳ್ಳಲಾಗಿದೆ.. ರಾಜ್ಯಪಾಲರ ಮುಂದೆ ಬಾಕಿ ಇರುವ ಪ್ರಾಸಿಕ್ಯೂಷನ್‌ ಅರ್ಜಿಗಳನ್ನು ಇತ್ಯರ್ಥ ಮಾಡಬೇಕು, ಪೂರ್ವಾನುಮತಿ ಕೊಡಬೇಕು ಎಂದು ಸಂಪುಟ ಆಗ್ರಹ ಮಾಡಿದೆ..
163ನೇ ವಿಧಿಯಲ್ಲಿ ಅಧ್ಯಾದೇಶ ಹೊರಡಿಸುವುದಕ್ಕೆ ರಾಜ್ಯಪಾಲರಿಗೆ ಸಚಿವ ಸಂಪುಟ ಸಭೆ ಶಿಫಾರಸು ಅಥವಾ ಸಲಹೆ ನೀಡುವ ಅಧಿಕಾರವನ್ನು ಸಚಿವ ಸಂಪುಟಕ್ಕೆ ನೀಡಲಾಗಿದೆ. ಇದರ ಆಧಾರದ ಮೇಲೆ ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

ಇದನ್ನೂ ಓದಿ; ರಸ್ತೆಯಲ್ಲಿ ಕಂತೆ ಕಂತೆ ಹಣ ಚೆಲ್ಲಾಡಿದ ಯುವಕ!

ಎಚ್‌.ಡಿ. ಕುಮಾರಸ್ವಾಮಿ ವಿರುದ್ಧ ಗಣಿಗಾರಿಕೆಗೆ ನೋಂದಣಿಯೆ ಆಗದ ಕಂಪನಿಗೆ ಅನುಮತಿ ನೀಡಿದ ಆರೋಪಿವಿದೆ. ಈ ಪ್ರಕರಣದಲ್ಲಿ, 21-11-2023ರಲ್ಲಿ ಪಿಸಿ ಕಾಯ್ದೆ ಸೆಕ್ಷನ್‌ 19, ಬಿಎನ್‌ಎಸ್‌ 197ರ ಅನ್ವಯ ಅನುಮೋದನೆ ಕೋರಲಾಗಿದೆ. ರಾಜ್ಯಪಾಲರಿಂದ ಈ ಬಗ್ಗೆ ಸ್ಪಷ್ಟೀಕರಣ ಕೇಳಲಾಗಿದ್ದು ಇದೇ ಆಗಸ್ಟ್‌ 8ರಂದು ಎಸ್‌ಐಟಿ ಅಧಿಕಾರಿಗಳು ರಾಜ್ಯಪಾಲರಿಗೆ ಸ್ಪಷ್ಟೀಕರಣ ಕೊಟ್ಟಿದ್ದಾರೆ..

ಶಶಿಕಲಾ ಜೊಲ್ಲೆಯವರು ಮಂತ್ರಿಯಾಗಿದ್ದಾಗ ಮಕ್ಕಳಿಗೆ ಮೊಟ್ಟೆ ವಿತರಣೆ ವಿಚಾರದಲ್ಲಿ ಹಗರಣ ನಡೆದಿದೆ ಎಂಬ ಆರೋಪವಿದೆ.. 9-12-2021ರಲ್ಲಿ ಲೋಕಾಯುಕ್ತ ದಿಂದ ತನಿಖೆಗೆ ರಾಜ್ಯಪಾಲರ ಪೂರ್ವಾನುಮೋದನೆಯನ್ನು ಸೆಕ್ಷನ್‌ 17 (ಎ) ಅನ್ವಯ ಕೋರಿಕೆ ಸಲ್ಲಿಸಲಾಗಿದೆ.. ಇದಕ್ಕೆ ಪೂರ್ವಾನುಮತಿ ನೀಡುವಂತೆ ಸಂಪುಟ ಆಗ್ರಹ ಮಾಡಿದೆ.

ಇನ್ನು ಬಿಜೆಪಿ ಸರ್ಕಾರದಲ್ಲಿ ಮಂತ್ರಿಯಾಗಿದ್ದ ಮುರುಗೇಶ್‌ ನಿರಾಣಿಯವರ ವಿರುದ್ಧ ನೇಮಕಾತಿಯಲ್ಲಿ ಅಕ್ರಮ ಮಾಡಲಾಗಿದೆ ಎಂಬ ಆರೋಪವಿದೆ.. ಈ ಹಗರಣದಲ್ಲಿ 26-12-2023ರಂದು 17 (ಎ) ಅನ್ವಯ ಪೂರ್ವಾನುಮತಿ ಕೋರಿಕೆ ಸಲ್ಲಿಸಲಾಗಿದ್ದು, ಅದೂ ಕೂಡಾ ರಾಜ್ಯಪಾಲರ ಬಳಿ ಇದೆ.

ಇದನ್ನೂ ಓದಿ; ಭದ್ರಾವತಿ ಶಾಸಕ ಸಂಗಮೇಶ್‌ ಪುತ್ರನ ಕೊಲೆಗೆ ಜೈಲಿಂದಲೇ ಸ್ಕೆಚ್‌!

ಇನ್ನು ಮಾಜಿ ಸಚಿವ ಜನಾರ್ದನರೆಡ್ಡಿ ಅವರ ವಿರುದ್ಧ ಅಕ್ರಮ ಗಣಿಗಾರಿಕೆ ಆರೋಪವಿದೆ.. ಈ ಪ್ರಕರಣದಲ್ಲಿ ತನಿಖೆ ಪೂರ್ತಿ ಮಾಡಿ, ಆರೋಪಪಟ್ಟಿ ಸಲ್ಲಿಸಲು ತನಿಖಾಧಿಕಾರಿಗಳು ಸಿದ್ದವಾಗಿದ್ದಾರೆ.. ಆದ್ರೆ ಇದಕ್ಕೆ ರಾಜ್ಯಪಾಲರ ಅನುಮತಿ ಬೇಕಾಗಿದೆ.. ಈ ಪ್ರಕರಣದಲ್ಲಿ 13-5-2024ರಂದು ಆರೋಪ ಪಟ್ಟಿ ಸಲ್ಲಿಸಲು ಪೂರ್ವಾನುಮೋದನೆ ಕೋರಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗಿದೆ.. ಆದ್ರೆ ರಾಜ್ಯಪಾಲರು ಈ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ.

Share Post